ಬುಧವಾರ, ಮಾರ್ಚ್ 22, 2023
33 °C

60,725 ಎಕರೆ ಅರಣ್ಯ ಭೂಮಿ ಅಕ್ರಮ ಮಂಜೂರು

ಚಿರಂಜೀವಿ ಕುಲಕರ್ಣಿ Updated:

ಅಕ್ಷರ ಗಾತ್ರ : | |

‌ಬೆಂಗಳೂರು: ರಾಜ್ಯದಲ್ಲಿ ಸುಮಾರು 60,725 ಎಕರೆ ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಅನ್ಯ ಉದ್ದೇಶಗಳಿಗೆ ಕಂದಾಯ ಇಲಾಖೆ ಮಂಜೂರು ಮಾಡಿದೆ.

ಕೆಲವು ಮಂಜೂರಾತಿ ಪ್ರಕ್ರಿಯೆಗಳು 1950ಕ್ಕೂ ಹಿಂದೆಯೇ ನಡೆದಿವೆ. ಆದರೆ, ಬಹುತೇಕ ಅಕ್ರಮ ಮಂಜೂರಾತಿ ಪ್ರಕರಣಗಳು 25 ವರ್ಷಗಳಿಂದೀಚೆಗೆ ನಡೆದಿರುವುದು ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳಿಂದ ಬಹಿರಂಗವಾಗಿದೆ.

ಅರಣ್ಯ ಇಲಾಖೆಯ 13 ವೃತ್ತಗಳಲ್ಲಿ ಅಕ್ರಮ ಮ್ಯುಟೆಷನ್‌ಗಳ ಪ್ರತಿಯೊಂದು ಪ್ರಕರಣಗಳಲ್ಲಿ ‌ದೀರ್ಘಾವಧಿಯಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳಿಂದ ಎಚ್ಚೆತ್ತುಕೊಂಡ ಮುಖ್ಯ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಅಕ್ರಮವಾಗಿ ಮಂಜೂರಾಗಿರುವ ಭೂಮಿಯ ದಾಖಲೆಗಳನ್ನು ಸಿದ್ಧಪಡಿಸಿ, ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಳ್ಳಲು ಕಳೆದ ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ.

ಎಲ್ಲ ವಿಭಾಗಗಳಲ್ಲಿ 60,725.78 ಎಕರೆ ಅರಣ್ಯ ಭೂಮಿಯನ್ನು 2022ರ ಫೆಬ್ರುವರಿವರೆಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಒತ್ತುವರಿ ಪ್ರಕರಣಗಳಿಗಿಂತಲೂ ಅಕ್ರಮ ಮಂಜೂರು ಪ್ರಕರಣಗಳೇ ಹೆಚ್ಚಾಗಿವೆ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಾರದೆ ಕರ್ನಾಟಕ ಅರಣ್ಯ ಕಾಯ್ದೆಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆಗಳನ್ನೂ ಉಲ್ಲಂಘಿಸಲಾಗಿದೆ.

ಕಂದಾಯ ಇಲಾಖೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಇಂತಹ ಆದೇಶಗಳನ್ನು ಮಾಡಿದಾಗ ಹಲವು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ತಹಶೀಲ್ದಾರ್‌ ಕೆಲಸವನ್ನೂ ಕಳೆದುಕೊಂಡಿದ್ದಾರೆ. ಹಸಿರು ಪ್ರದೇಶವನ್ನು ಗಣಿಗಾರಿಕೆಗೆ ನೀಡಲು 251 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿದ್ದ ಚಿತ್ರದುರ್ಗದ ಜಿಲ್ಲಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಅವರು ಏಪ್ರಿಲ್‌ನಲ್ಲಿ ಸೂಚಿಸಿದ್ದರು.

ಶಿವಮೊಗ್ಗ ವೃತ್ತದಲ್ಲಿ ಅತಿ ಹೆಚ್ಚು ಅಂದರೆ, 25,381.8 ಎಕರೆ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. ನಂತರ ಸ್ಥಾನದಲ್ಲಿ ಕಲಬುರಗಿ ವೃತ್ತ (10,748.44 ಎಕರೆ), ಧಾರವಾಡ (5,801.8 ಎಕರೆ), ಬೆಂಗಳೂರು (5,850.27 ಎಕರೆ), ಕೆನರಾ (5,123.78 ಎಕರೆ) ವೃತ್ತಗಳಿವೆ.

ಅಕ್ರಮ ಮಂಜೂರಾತಿ ಸಮಸ್ಯೆಯು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಅರಣ್ಯ ಪ್ರದೇಶ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದ್ದರೂ ತಹಶೀಲ್ದಾರ್‌ಗಳು ಅಗತ್ಯ ಬದಲಾವಣೆಗಳನ್ನು ಮಾಡಿಲ್ಲ. ಇದರಿಂದ, 11.01 ಲಕ್ಷ ಎಕರೆಯಷ್ಟು ಅರಣ್ಯ ಪ್ರದೇಶವು ಅತಿಕ್ರಮಣಕ್ಕೆ ಮತ್ತು ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಅತಿಕ್ರಮಣ ಮಾಡಿರುವ ಪ್ರದೇಶವನ್ನು ವಾಪಸ್‌ ಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ’ ಎಂದು ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ರಾಜ ಕಿಶೋರ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು