ಸೋಮವಾರ, ಸೆಪ್ಟೆಂಬರ್ 26, 2022
22 °C
ತನಿಖೆಗೆ ಮುಂದಾಗಿದ್ದ ಉಮೇಶ ಕತ್ತಿ

ಪವನ ವಿದ್ಯುತ್‌ ಅಕ್ರಮ ಪತ್ತೆ: ಅರಣ್ಯ ದುರ್ಬಳಕೆ–ಅಧಿಕಾರಿಗಳ ಶಾಮೀಲು

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ 10 ಜಿಲ್ಲೆಗಳಲ್ಲಿ 22 ಖಾಸಗಿ ಕಂಪನಿಗಳು ಅರಣ್ಯ ಭೂಮಿ ಭೋಗ್ಯಕ್ಕೆ ಪಡೆದು ಅನುಷ್ಠಾನ ಗೊಳಿಸಿರುವ  45 ಪವನ ವಿದ್ಯುತ್‌ ಯೋಜನೆಗಳಲ್ಲಿ ಅಕ್ರಮ ನಡೆಸಿರುವುದು ಪತ್ತೆಯಾಗಿದೆ.

ಈ ಅಕ್ರಮಕ್ಕೆ ಇಲಾಖೆ ಹಿರಿಯ ಅಧಿಕಾರಿಗಳೂ ಕೈ ಜೋಡಿಸಿರುವುದು ಬಹಿರಂಗವಾಗಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಪವನ ವಿದ್ಯುತ್‌ ಯೋಜನೆ ಗಳಿಗೆ ನಿರ್ದಿಷ್ಟ ಅವಧಿಗೆ ಲೀಸ್‌ ನೀಡಿದ್ದ ಅರಣ್ಯ ಭೂಮಿಯನ್ನು ಕಂಪನಿಗಳು ದುರ್ಬಳಕೆ ಮಾಡಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿ ದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಅರಣ್ಯ ಸಚಿವರಾಗಿದ್ದ ಉಮೇಶ ಕತ್ತಿ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಜಾವೇದ್‌ ಅಖ್ತರ್‌ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌– ಅರಣ್ಯ ಪಡೆ ಮುಖ್ಯಸ್ಥರು) ರಾಜ್‌ ಕಿಶೋರ್‌ ಸಿಂಗ್‌ ಅವರಿಂದ ವರದಿ ಪಡೆದಿದ್ದರು.

ಪ್ರಕರಣ ಗಂಭೀರವಾಗಿರುವ ಕಾರಣಕ್ಕೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಕಂಪನಿಗಳ ಮೇಲೆ ಕಾನೂನು ಕ್ರಮ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಜರುಗಿಸಲು ಲೋಕಾಯುಕ್ತ ಅಥವಾ ಸಿಐಡಿಗೆ ವಹಿಸಲು ಉಮೇಶ ಕತ್ತಿ ಮುಂದಾಗಿದ್ದರು. ಅಲ್ಲದೆ, ಇದಕ್ಕೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿಗೆ ಕಡತ ಮಂಡಿಸಲು ನಿರ್ಧರಿಸಿದ್ದರು.

ಅದಕ್ಕೂ ಮೊದಲು ಮತ್ತೊಮ್ಮೆ ಸ್ಪಷ್ಟ ಅಭಿಪ್ರಾಯದೊಂದಿಗೆ ಕಡತ ಮಂಡಿಸುವಂತೆ ಎಸಿಎಸ್‌ಗೆ ಸೂಚಿಸಿ ದ್ದರು. ಆಗಸ್ಟ್‌ 30ರಂದು ಅವರು ಅಭಿಪ್ರಾಯ ನೀಡಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನವೇ ಕತ್ತಿ (ಸೆ.6ಕ್ಕೆ) ನಿಧನರಾಗಿದ್ದಾರೆ. ಸಚಿವರು ನೀಡಿದ್ದ ಟಿಪ್ಪಣಿ ಮತ್ತು ಎಸಿಎಸ್‌ ಅಭಿಪ್ರಾಯದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಮತ್ತು ಜೋಗಿಮಟ್ಟಿ ಅರಣ್ಯ ಪ್ರದೇಶಗಳಲ್ಲಿ ಮೆ.ಎನಾರ್‌ಕಾನ್‌ (ಇಂಡಿಯಾ) ಸಂಸ್ಥೆಗೆ 221.80 ಹೆಕ್ಟೇರ್‌ ಅರಣ್ಯವನ್ನು 2003ರ ಜೂನ್‌ 20ರಿಂದ 15 ವರ್ಷ ಗಳಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಈ ಅವಧಿ 2018ರ ಜೂನ್‌ 19ಕ್ಕೆ ಮುಗಿದಿದ್ದರೂ ನವೀಕರಿಸಿರಲಿಲ್ಲ. ಎರಡು ವರ್ಷಗಳ ಬಳಿಕ 2020ರ ಮಾರ್ಚ್‌ 7 ಮತ್ತು ಮೇ 20ರಂದು ನವೀಕರಣಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಿರುವ ಮಾಹಿತಿ ಪಿಸಿಸಿಎಫ್‌ ಪತ್ರಗಳಲ್ಲಿವೆ. ಆದರೆ, ಅವಧಿ ಮುಗಿದ ದಿನದಿಂದ ಅರ್ಜಿ ಸಲ್ಲಿಸಿರುವವರೆಗೆ ಪವನ ವಿದ್ಯುತ್‌ ಉತ್ಪಾದಿಸಿದ ಬಗ್ಗೆ ಉಲ್ಲೇಖಿಸಿಲ್ಲ. ಗಮನಾರ್ಹ ಎಂದರೆ ಅರ್ಜಿಯನ್ನು ಇಲಾಖೆ ಇನ್ನೂ ನವೀಕರಿ ಸಿಲ್ಲ! ಈ ಮಧ್ಯೆ, ಎನಾರ್‌ಕಾನ್‌ ಹೆಸರು ಮೆ. ವಿಂಡ್‌ ವರ್ಲ್ಡ್‌ (ಇಂಡಿಯಾ) ಎಂದು ಬದಲಾಗಿರುವುದು ದಾಖಲೆಗಳಿಂದ ಗೊತ್ತಾಗಿದೆ. ಈ ಕಂಪನಿಯು ಅರಣ್ಯ ಭೂಮಿಯನ್ನು ದುರ್ಬಳಕೆ ಮಾಡಿದೆ ಮತ್ತು ವಿಧಿಸಿದ್ದ ಷರತ್ತು ಉಲ್ಲಂಘಿಸಿದೆ. ಅಲ್ಲದೆ, ಕಂಪನಿಯು 107 ಪವನ ವಿದ್ಯುತ್‌ ಟರ್ಬೈನ್‌ಗಳನ್ನು ಸ್ಥಾಪಿಸಿ ಹೂಡಿಕೆದಾರರಿಗೆ ಮಾರಾಟ ಮಾಡಿದೆ. ಕಂಪನಿಯು ದಿವಾಳಿ ಎಂದು ಘೋಷಿಸಿಕೊಂಡಿದ್ದರೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಪವನ ವಿದ್ಯುತ್‌ ಉತ್ಪಾದಿಸುತ್ತಿದೆ. ಒಪ್ಪಂದದ ಅವಧಿಯ ಬಳಿಕ ಅಕ್ರಮವಾಗಿ ವಿದ್ಯುತ್‌ ಉತ್ಪಾದಿಸಲು ಅಂದಿನ ಪಿಸಿಸಿಎಫ್‌ ಮತ್ತು ಚಿತ್ರದುರ್ಗ ಡಿಎಫ್‌ಒ ಅವಕಾಶ ನೀಡಿ ಕರ್ತವ್ಯಲೋಪ ಎಸಗಿರುವುದನ್ನು ಗುರುತಿಸಲಾಗಿದೆ. 

ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುಹೇಶ್ವರಗುಡ್ಡದಲ್ಲಿ 19.94 ಹೆಕ್ಟೇರ್‌ ಮತ್ತು 37 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಭೋಗ್ಯಕ್ಕೆ ಪಡೆದು ಪವನ ವಿದ್ಯುತ್‌ ಉತ್ಪಾದಿಸುತ್ತಿರುವ ಹೈದರಾಬಾದಿನ ಮೆ. ನುಜಿವೀಡು ಸೀಡ್ಸ್‌ ಕಂಪನಿ ಕೂಡಾ ಷರತ್ತುಗಳನ್ನು ಉಲ್ಲಂಘಿಸಿದೆ. ಅಲ್ಲದೆ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೂ ಕಾನೂನು ಉಲ್ಲಂಘಿಸಿರುವುದು ಪತ್ತೆಯಾಗಿದೆ. 43 ಇತರ ಪವನ ವಿದ್ಯುತ್‌ ಯೋಜನೆಗಳ ಅನುಷ್ಠಾನದಲ್ಲೂ ಪತ್ತೆಯಾಗಿರುವ ಕಾನೂನು ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಲು ಉಮೇಶ ಕತ್ತಿ ನಿರ್ಧರಿಸಿದ್ದರು.

ಯೋಜನೆಗಳ ಮಾಹಿತಿಯೇ ಇಲ್ಲ!

ಸಚಿವರಿಗೆ ಜೂನ್‌ 14ರಂದು ಪಿಸಿಸಿಎಫ್‌ ನೀಡಿರುವ ಅಪೂರ್ಣ ವರದಿಯಲ್ಲಿ ಎಲ್ಲ ಕಂಪನಿಗಳು ಷರತ್ತುಗಳನ್ನು ಉಲ್ಲಂಘಿಸಿರುವುದು ಬಹಿರಂಗವಾಗಿದೆ.

ಯೋಜನೆಗಳು ಆರಂಭವಾಗಿ ಅನೇಕ ವರ್ಷಗಳಾದರೂ ಯಾವುದೇ ಮಾಹಿತಿ ಕ್ರೋಡೀಕರಿಸಿಲ್ಲ. 23 ಯೋಜನೆಗಳಲ್ಲಿ ಷರತ್ತು ಪಾಲಿಸಿರುವ ಸ್ಥಿತಿಗತಿ ವರದಿಯೇ ಇಲ್ಲ. ನಾಲ್ಕು ಯೋಜನೆಗಳಲ್ಲಿ ಪರಿಹಾರಾತ್ಮಕ ಅರಣ್ಯ ಬೆಳೆದಿರುವುದು, 2 ಯೋಜನೆಗಳಲ್ಲಿ ಹದಗೆಟ್ಟ ಅರಣ್ಯಪ್ರದೇಶಗಳಿರುವ ಮಾಹಿತಿ ನೀಡಲಾಗಿದೆ.
39 ಯೋಜನೆಗಳ ಪರಿಹಾರಾತ್ಮಕ ಅರಣ್ಯಗಳ ಮಾಹಿತಿಯೇ ಇಲ್ಲ.

ಎಲ್ಲ 45 ಯೋಜನೆಗಳಲ್ಲಿ ಕಂಪನಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಭೋಗ್ಯದ ಮೊತ್ತ ಮತ್ತು ನಿವ್ವಳ ಪ್ರಸ್ತುತ ಮೌಲ್ಯ (ಎನ್‌ಪಿವಿ) ಮತ್ತು ಇತರ ಪಾವತಿಗಳ ವಿವರಗಳು, ಈ ಹಣ ಸಂದಾಯವಾದ ದಾಖಲೆಗಳು ಮತ್ತು ಹಣ ಬಳಕೆ ಮಾಹಿತಿ ಲಭ್ಯವಿಲ್ಲ. ಕಂಪನಿಗಳು ಸೃಜಿಸಬೇಕಾದ ಕುಬ್ಜ ಮತ್ತು ಔಷಧೀಯ ಅರಣ್ಯ ಮತ್ತು ರಸ್ತೆ ಬದುಗಳು, ರಸ್ತೆಗಳ ಮಾಹಿತಿಯೂ ಇಲ್ಲ. ಯೋಜನೆಗಳ ಜಾರಿ, ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲರಾಗಿರುವುದು ವರದಿಯಲ್ಲಿ ನಮೂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು