ಭಾನುವಾರ, ಏಪ್ರಿಲ್ 18, 2021
33 °C

ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಎಚ್‌.ಟಿ. ಕೃಷ್ಣಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಎಚ್‌.ಟಿ.ಕೃಷ್ಣಪ್ಪ (91) ಗುರುವಾರ ರಾತ್ರಿ ಬೆಂಗಳೂರಿನ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾದರು.

ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಕೃಷ್ಣಪ್ಪ ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1973ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿ ಕೆಲಸ ಮಾಡಿದ್ದರು.

1985ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರಾದರೂ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ರಾಮಕೃಷ್ಣ ಹೆಗಡೆ ಸರ್ಕಾರ ವಿಸರ್ಜನೆಗೊಂಡು ಸಾರ್ವತ್ರಿಕ ಚುನಾವಣೆ ಎದುರಾಯಿತು.

ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಾಮಕೃಷ್ಣ ಹೆಗಡೆ ಅವರ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಹೆಗಡೆ ಅವರ ಸರ್ಕಾರದಲ್ಲಿ ಆರೋಗ್ಯ, ಅಬಕಾರಿ, ವೈದ್ಯಕೀಯ ಶಿಕ್ಷಣ ಸಚಿವರಾದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ಎಚ್.ಟಿ. ಕೃಷ್ಣಪ್ಪ ಅವರು ನಂತರ ರಾಜಕಾರಣ ಪ್ರವೇಶ ಮಾಡಿದ್ದರು. ತಾಲ್ಲೂಕಿಗೆ ಹೇಮಾವತಿ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಲಾ ಪ್ರೇಮಿಯೂ ಆಗಿದ್ದ ಅವರು ಮಾಜಿ ಸಚಿವ ಕೆ.ವಿ. ಶಂಕರಗೌಡರ ‘ಪಾದುಕಾ ಕಿರೀಟಿ’ ನಾಟಕದಲ್ಲಿ ಪಾತ್ರ ಮಾಡಿದ್ದರು. ರಾಜ್ಯಮಟ್ಟದ ವಾಲಿಬಾಲ್‌ ಆಟಗಾರ ಕೂಡ ಆಗಿದ್ದರು.

ಅವರಿಗೆ ಪುತ್ರ ಇದ್ದಾರೆ. ಅಂತ್ಯಕ್ರಿಯೆ ನಾಗಮಂಗಲ ಸಮೀಪದ ಅವರ ತೋಟದಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು