ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಾಹತುಶಾಹಿ ದೇಶದ್ರೋಹ ಕಾಯ್ದೆ ರದ್ದಾಗಲಿ: ನ್ಯಾ ಎಚ್‌.ಎನ್‌.ನಾಗಮೋಹನ್‌ ದಾಸ್‌

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅಭಿಪ್ರಾಯ
Last Updated 20 ಮಾರ್ಚ್ 2021, 12:53 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ್ರೋಹ, ಮಾನಹಾನಿ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆಗಳನ್ನು ಕಾನೂನಿನ ಪುಸ್ತಕದಿಂದಲೇ ತೆಗೆದುಹಾಕಬೇಕು. ಇವೆಲ್ಲಾ ವಸಾಹತುಶಾಹಿ ಕಾಯ್ದೆಗಳು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅಭಿಪ್ರಾಯಪಟ್ಟರು.

ಫೋರಂ ಫಾರ್‌ ಡೆಮಾಕ್ರಸಿ ಆ್ಯಂಡ್‌ ಕಮ್ಯುನಲ್‌ ಅಮಿಟಿ ಶನಿವಾರ ಆಯೋಜಿಸಿದ್ದ ‘ದೇಶವು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಕುರಿತ ಚರ್ಚೆ’ಯಲ್ಲಿ ಅವರು ಮಾತನಾಡಿದರು.

‘ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳು ಸಂವಿಧಾನದ ತಳಹದಿಯ ಮೇಲೆ ನಿಂತಿವೆ. ಸಂವಿಧಾನ ನಮ್ಮ ಧರ್ಮಗ್ರಂಥ. ಅದೇ ನಮ್ಮೆಲ್ಲರ ರಕ್ಷಾ ಕವಚ ಆಗಬೇಕೆ ಹೊರತು ಖಾಕಿ ಚಡ್ಡಿಯಲ್ಲ’ ಎಂದು ಪರೋಕ್ಷವಾಗಿ ಆರ್‌ಎಸ್‌ಎಸ್‌ ಅನ್ನು ಕುಟುಕಿದರು.

‘ಇಂದು ಸಂವಿಧಾನಕ್ಕೇ ಆಪತ್ತು ಎದುರಾಗಿದೆ.ನ್ಯಾಯಾಂಗ ವ್ಯವಸ್ಥೆಯು ಆಂತರಿಕ ಹಾಗೂ ಬಾಹ್ಯ ಒತ್ತಡ ಎದುರಿಸುತ್ತಿದೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ನೇಮಕದ ವೇಳೆ ರಾಜಕೀಯ ಹಸ್ತಕ್ಷೇಪ ನಡೆಸಲಾಗುತ್ತಿದೆ. ಅರ್ಹರನ್ನು ಕಡೆಗಣಿಸಿ ತಮಗೆ ಬೇಕಾದವರಿಗೆ ಆಯಾಕಟ್ಟಿನ ಹುದ್ದೆ ನೀಡಲಾಗುತ್ತಿದೆ. ನ್ಯಾಯದಾನದ ವಿಚಾರದಲ್ಲೂ ಅಸಮಾನತೆ ಮನೆಮಾಡಿದೆ. ಸರ್ಕಾರದ ನೀತಿಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ಮೂಗು ತೂರಿಸುತ್ತಿವೆ.ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಇತರ ಜ್ವಲಂತ ಸಮಸ್ಯೆಗಳೆಲ್ಲಾ ಗೌಣವಾಗಿವೆ. ಇದು ಆತಂಕಕಾರಿ’ ಎಂದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ‘ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕವಾದುದು. ಇದು ರೈತ ವಿರೋಧಿ. ದೇಶವು ಇಂದು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಸವಿಧಾನವು ಆಳುವವರ ಅಧೀನಕ್ಕೊಳಪಟ್ಟಿದೆ. ಅದನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಕೇಂದ್ರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಸನಬದ್ಧಗೊಳಿಸಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ. ಭಾರೀ ವಿರೋಧದ ನಡುವೆಯೂ ಇವುಗಳನ್ನು ಅನುಷ್ಠಾನಗೊಳಿಸಿದ್ದಾದರೂ ಏಕೆ’ ಎಂದು ಪ್ರಶ್ನಿಸಿದರು.

‘ಪ್ರಜ್ಞಾವಂತರು ಸರ್ಕಾರದ ಧೋರಣೆಯನ್ನು ಟೀಕಿಸಿ ಕೇಂದ್ರಕ್ಕೆ ಪತ್ರ ಬರೆದರೆ ಅವರ ವಿರುದ್ಧವೇ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತಿದೆ. ಜನರು ಭಯದಿಂದಾಗಿ ಪ್ರಶ್ನಿಸುವ ಮನೋಭಾವವನ್ನೇ ಕಳೆದುಕೊಂಡಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ.ನಾರಾಯಣ ಹೇಳಿದರು.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ‘ಸುದ್ದಿಮನೆಗಳಲ್ಲಿ ವೈವಿಧ್ಯತೆ ಮರೆಯಾಗಿದೆ. ಮಾಧ್ಯಮವು ಕುಸಿದು ಬಿದ್ದಿದೆ. ಆಳುವವರನ್ನು ಟೀಕಿಸುವ ನೈತಿಕತೆಯನ್ನೇ ಕಳೆದುಕೊಂಡಿವೆ’ ಎಂದು ತಿಳಿಸಿದರು.

ಎಫ್‌ಡಿಸಿಎ ಕಾರ್ಯದರ್ಶಿ ಎಂ.ಎಫ್‌.ಪಾಷ, ಉಪಾಧ್ಯಕ್ಷೆ ಕಾತ್ಯಾಯಿನಿ ಚಾಮರಾಜ್‌, ವೈದ್ಯ ಮೊಹಮ್ಮದ್‌ ತಾಹ ಮತೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT