ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಿಂಗಾಧಾರಿತ ಹಿಂಸೆ ಶುರುವಲ್ಲೇ ಚಿವುಟಬೇಕು’

ಚೆನ್ನೈನ ಯುಎಸ್‌ ಕಾನ್ಸಲೇಟ್ ನಡೆಸಿದ ವೆಬಿನಾರ್‌ನಲ್ಲಿ ಅಭಿಮತ
Last Updated 9 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಧಾರಿತ ಹಿಂಸಾಚಾರದ ಬೇರು ಇರುವುದು ಸಿನಿಮಾ ಬರವಣಿಗೆಯಲ್ಲಿ ಎಂದು ಸಿನಿಮಾ ನಿರ್ದೇಶಕ ಮಹೇಶ್ ನಾರಾಯಣನ್ ಅಭಿಪ್ರಾಯಪಟ್ಟರು.

ಅಮೆರಿಕ-ಇಂಡಿಯಾ ಎಜುಕೇಷನಲ್ ಫೌಂಡೇಶನ್ (ಯುಎಸ್ಇಐಎಫ್) ಮತ್ತು ದಿ ನ್ಯೂಸ್ ಮಿನಿಟ್ ಸಹಯೋಗದೊಂದಿಗೆ ಚೆನ್ನೈನಲ್ಲಿರುವ ಅಮೆರಿಕ ಕಾನ್ಸಲೇಟ್ ಜನರಲ್ ಕಚೇರಿ ಬುಧವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ರೀಲ್ ಮತ್ತು ರಿಯಲ್: ಲಿಂಗಾಧಾರಿತ ಹಿಂಸಾಚಾರದ ಮೇಲೆ ಮಾಧ್ಯಮ ಮತ್ತು ಮನರಂಜನೆಯ ಪ್ರಭಾವ’ ಎಂಬ ವಿಷಯದ ಕುರಿತು ಸಂವಾದ ನಡೆಯಿತು.

‘ಹಿಂಸಾಚಾರದ ದೃಶ್ಯವನ್ನು ಬರಹ- ಗಾರ ರಂಜನೀಯವಾಗಿ ಬರೆದರೆ, ಅದು ತೆರೆಯ ಮೇಲೆ ಇನ್ನಷ್ಟು ರೋಚಕವಾಗಿ ಮೂಡಿಬರುತ್ತದೆ. ತೃತೀಯ ಲಿಂಗಿಗಳೂ ಸೇರಿದಂತೆ ಎಲ್‌ಜಿಬಿಟಿ ಸಮುದಾಯವು ಸಿನಿಮಾಗಳಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಿರುವುದು ಇದೇ ಕಾರಣಕ್ಕೆ. ಈ ಪ್ರವೃತ್ತಿ ಬದಲಾಗಬೇಕಿದ್ದು, ಆರಂಭದಲ್ಲೇ ಸರಿಪಡಿಸಬೇಕಿದೆ’ ಎಂದು ಮಹೇಶ್ ಹೇಳಿದರು.

‘ನ್ಯೂಸ್ ಮಿನಿಟ್’ ಮುಖ್ಯಸ್ಥೆ ಧನ್ಯಾ ರಾಜೇಂದ್ರನ್ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲಿನ ಹಿಂಸಾಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವುದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು ಎಂಬುದು ತೋಚುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಿನಿಮಾ ಹೀರೊ ಕೈಯಲ್ಲಿ ಹಿಂಸಾ- ಚಾರ ಮಾಡಿಸಿದರೆ, ಅನುಯಾಯಿಗಳು ಅವನನ್ನು ಅನುಸರಿಸದೆ ಇರುತ್ತಾರೆಯೇ? ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ದೌರ್ಜನ್ಯ, ಹಿಂಸಾಚಾರದ ಘಟನೆಯನ್ನು ವರದಿ ಮಾಡುವುದರ ಜೊತೆಗೆ ಸಂತ್ರಸ್ತರಿಗೆ ಮಾಧ್ಯಮಗಳು ದನಿಯಾಗಬೇಕು. ಜನರನ್ನು ಈ ವಿಚಾರದಲ್ಲಿ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ’ ಎಂದರು.

‘ಮಾಧ್ಯಮಗಳ ಭಾಷಾ ಬಳಕೆಯು ದಾರಿ ತಪ್ಪಿದೆ. ‘ಅನೈತಿಕ ಸಂಬಂಧ’ ಎಂದು ಹೇಳುವ ಮೂಲಕ ಮಹಿಳೆ ಕೊಲೆಗೆ ಅರ್ಹಳು ಎಂಬರ್ಥದ ವರದಿ ಪ್ರಕಟಿಸಲಾಗುತ್ತದೆ. ಅಗತ್ಯ ತರಬೇತಿ ಮೂಲಕ ಮಾಧ್ಯಮ ಸಿಬ್ಬಂದಿಯನ್ನು ಸೂಕ್ಷ್ಮ ಸಂವೇದನೆ ಉಳ್ಳವರನ್ನಾಗಿ ಮಾಡಬೇಕಿದೆ. ಈ ದಿಸೆಯಲ್ಲಿ ಸಿನಿಮಾ ತಯಾರಿಸುವವರಿಗೂ ಈ ದಿಸೆಯಲ್ಲಿ ಕಾರ್ಯಾಗಾರ ಅವಶ್ಯ’ ಎಂದರು.

ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಸಿಂಘಾಲ್ ಮಾತನಾಡಿ, ‘ಸಾಹಿತ್ಯ ಕೂಡ ಪ್ರಭಾವಿ ಮಾಧ್ಯಮ. ಸಾಕ್ಷರತಾ ಕಾರ್ಯಕ್ರಮದ ಫಲವಾಗಿ 30 ವರ್ಷಗಳ ಹಿಂದೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಮದ್ಯನಿಷೇಧ ಚಳವಳಿ ರೂಪುಗೊಂಡಿತ್ತು’ ಎಂದು ಸ್ಮರಿಸಿದರು. ಕಾನ್ಸಲೇಟ್‌ ಅಧಿಕಾರಿ ಮೌಲಿಕ್‌ ಬರ್ಕಾನ ಸಂವಾದ ನಡೆಸಿಕೊಟ್ಟರು.

***

ಈಗ ಪುರುಷ ಪ್ರಧಾನ ಚಿತ್ರಗಳದ್ದೇ ಸುಗ್ಗಿ. ಆಗಾಗ ಬರುವ ಮಹಿಳಾ ಪ್ರಧಾನ ಚಿತ್ರಗಳ ಕಥೆ ಕೊನೆಗೆ ಏನೇನೋ ಆಗಿ ದಾರಿತಪ್ಪುತ್ತದೆ. ಸೂಕ್ಷ್ಮತನದ ಹೊಸ ಬರಹಗಾರರು ಬರಬೇಕಿದೆ

- ಮಹೇಶ್ ನಾರಾಯಣನ್, ಸಿನಿಮಾ ನಿರ್ದೇಶಕ

***

‘ಜಾಗೃತಿಯೇ ಪರಿಹಾರ’

ಮಹಿಳೆಯರ ಮೇಲೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿರುವುದು ಸದ್ಯದ ದೊಡ್ಡ ಸಮಸ್ಯೆ ಎಂದು ಪತ್ರಕರ್ತೆ ಧನ್ಯಾ ರಾಜೇಂದ್ರನ್ ಹೇಳಿದರು. ‘ಮಹಿಳೆಯರು ಜಾಗೃತರಾಗುವುದೇ ಇದಕ್ಕಿರುವ ಪರಿಹಾರ. ಅವಘಡದ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಬೇಕು. ಸೈಬರ್ ಕ್ರೈಂ ಕಾನೂನುಗಳನ್ನು ಓದಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಮಾನಸಿಕ, ಲೈಂಗಿಕ ದೌರ್ಜನ್ಯದಿಂದಎಷ್ಟೋ ಮಹಿಳೆಯರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಇಂತಹದ್ದು ಎದುರಾದಾಗ ನಾನೂ ಧೈರ್ಯದಿಂದ ಎದುರಿಸಿದ್ದೆ. ಮಹಿಳೆಯರಿಗೆ ಸಹಾಯ ಮಾಡುವ ಸಂಘಟನೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್, ರಿಪೋರ್ಟ್ ಎಂಬ ಟೂಲ್‌ಗಳಿದ್ದು, ಬೇಡವಾದ ವ್ಯಕ್ತಿಗಳನ್ನು ಖಾತೆಯಿಂದ ಕಿತ್ತೊಗೆಯಬಹುದು. ಈ ಬಗ್ಗೆ ಅರಿವಿರಬೇಕಷ್ಟೇ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT