ಗುರುವಾರ , ಅಕ್ಟೋಬರ್ 28, 2021
18 °C

ಲಿಂಗಾಧಾರಿತ ಬಜೆಟ್‌ ಘೋಷಣೆಗೆ ಸೀಮಿತ: ಸಿಎಜಿ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಿಂಗ ತಾರತಮ್ಯ ನಿವಾರಣೆಗಾಗಿ ಲಿಂಗಾಧಾರಿತ ಬಜೆಟ್‌ ಪರಿಕಲ್ಪನೆಯ ಅಡಿಯಲ್ಲಿ ಕೆಲವು ವರ್ಷಗಳಿಂದ ಈಚೆಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಘೋಷಿಸಿದ್ದರೂ, ವಾಸ್ತವಿಕ ವೆಚ್ಚದಲ್ಲಿ ಕುಸಿತವಾಗಿದೆ. ಲಿಂಗಾಧಾರಿತ ಬಜೆಟ್‌ ಘೋಷಣೆಗೆ ಸೀಮಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

‘ಲಿಂಗಾಧಾರಿತ ಬಜೆಟ್‌ ಎಂಬುದು ಮಹಿಳೆಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡುವುದಕ್ಕೆ ಸೀಮಿತವಾಗಿದೆ. ಅವುಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುವ ಉದ್ದೇಶದಿಂದ ಮೌಲ್ಯಮಾಪನ ಮತ್ತು ಸಮಗ್ರ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅನುದಾನದ ಹಂಚಿಕೆ 2016–17 ರಿಂದಲೂ ಜಾಸ್ತಿಯಾಗಿತ್ತು. ಆದರೆ, 2019–20 ರಲ್ಲಿ ತುಸು ಇಳಿಕೆ ಕಂಡುಬಂದಿದೆ. ವಾಸ್ತವಿಕ ವೆಚ್ಚದಲ್ಲಿ 2015–16 ಹೊರತುಪಡಿಸಿದರೆ ಎಲ್ಲ ವರ್ಷಗಳಲ್ಲೂ ಕಡಿಮೆಯೇ ಇತ್ತು ಎಂಬುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.

ಅಪ್ರಾಪ್ತ ಬಾಲಕಿಯರ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ‘ಸಬಲ’ ಯೋಜನೆಗೆ 2018–19ರಲ್ಲಿ ₹ 4.23 ಕೋಟಿ ಹಂಚಿಕೆ ಮಾಡಲಾಗಿತ್ತು. 2019–20 ರಲ್ಲಿ ಈ ಯೋಜನೆಯ ಅನುದಾನವನ್ನು ₹ 9 ಕೋಟಿಗೆ ಹೆಚ್ಚಿಸಿದ್ದರೂ, ವಾಸ್ತವವಾಗಿ ಮಾಡಿರುವ ವೆಚ್ಚ ₹ 76 ಲಕ್ಷ (ಶೇಕಡ 8.44) ಮಾತ್ರ. ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆಗಾಗಿ ಜಾರಿಯಲ್ಲಿರುವ ‘ಮಾತೃಶ್ರೀ’ ಯೋಜನೆಗೆ 2018–19 ರಲ್ಲಿ ₹ 350 ಕೋಟಿ ಒದಗಿಸಲಾಗಿತ್ತು. 2019–20 ರಲ್ಲಿ ಅದನ್ನು ₹ 450 ಕೋಟಿಗೆ ಹೆಚ್ಚಿಸಿದ್ದರೂ, ₹ 78.24 ಕೋಟಿ (ಶೇ 16.64) ಮಾತ್ರ ವೆಚ್ಚ ಮಾಡಲಾಗಿತ್ತು ಎಂದು ಸಿಎಜಿ ತಿಳಿಸಿದೆ.

2019–20ರ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಪಿಂಚಣಿ ಯೋಜನೆ, ಸುರಕ್ಷಾ ಯೋಜನೆ, ಉಜ್ವಲಾ ಯೋಜನೆ, ಕರ್ನಾಟಕ ರಾಜ್ಯ ಹಣಕಾಸು ನಿಗಮದ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನ ವಿತರಣೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಕಾರ್ಯಕ್ರಮದ ಅನುದಾನದ ಹಂಚಿಕೆಯಲ್ಲಿ ಗಣನೀಯ ಕುಸಿತವಾಗಿದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಯೋಜನೆಗಳ ಕೊರತೆ: ಕೃಷಿ, ಜವಳಿ ಮತ್ತು ಆಹಾರ ಕೈಗಾರಿಕೆಗಳು, ಪೊಲೀಸ್‌, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುತ್ತಿದ್ದರೂ ಅವರಿಗಾಗಿ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿಲ್ಲ ಎಂದು ಸಿಎಜಿ ಆಕ್ಷೇಪಿಸಿದೆ.

‘ಕೇಂದ್ರ ಸರ್ಕಾರವು 2003ರಲ್ಲಿ ರಚಿಸಿದ್ದ ತಜ್ಞರ ತಂಡವು ರಕ್ಷಣೆ, ಆರ್ಥಿಕ ಮತ್ತು ಸಾಮಾಜಿಕ ಸೇವಾ ವಲಯಗಳಿಂದ ಕ್ರಮಬದ್ಧವಾದ ಮಾಹಿತಿ ಸಂಗ್ರಹಿಸಿ ಲಿಂಗಾಧಾರಿತ ಬಜೆಟ್‌ ರೂಪಿಸುವಂತೆ ಸಲಹೆ ನೀಡಿತ್ತು. ಈ ಸಲಹೆಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ’ ಎಂದು ಹೇಳಿದೆ.

ಸಭೆ ಸೇರದ ಕಾರ್ಯಪಡೆ!
ಲಿಂಗಾಧಾರಿತ ಬಜೆಟ್‌ ತಯಾರಿ ಹಾಗೂ ಅನುಷ್ಠಾನದ ಮೇಲ್ವಿಚಾರಣೆ ನಡೆಸಲು 2013 ರಲ್ಲೇ ವಿಶೇಷ ಕಾರ್ಯಪಡೆ ರಚಿಸಲಾಗಿತ್ತು. ಈ ಕಾರ್ಯಪಡೆಯು 2015–16 ರಿಂದ 2019–20ರ ನಡುವಿನ ಅವಧಿಯಲ್ಲಿ ಕೇವಲ ಎರಡು ಬಾರಿ ಸಭೆ ಸೇರಿತ್ತು ಎಂಬ ಅಂಶ ಸಿಎಜಿ ವರದಿಯಲ್ಲಿದೆ.

ರಾಜ್ಯ ಸರ್ಕಾರ ಲಿಂಗಾಧಾರಿತ ಬಜೆಟ್‌ ಮತ್ತು ಮಹಿಳಾ ಉದ್ದೇಶಿತ ಯೋಜನೆಗಳ ಕುರಿತು ನಿಯಮಿತವಾಗಿ ಮೌಲ್ಯಮಾಪನ ನಡೆಸಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ಫಲಾನುಭವಿಗಳಿಗೆ ಆಗಿರುವ ಉಪಯೋಗ ಆಧರಿಸಿ ಮೌಲ್ಯಮಾಪನ ನಡೆಯಬೇಕು ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.