ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರ ಸಮಾವೇಶದ 5 ನಿಮಿಷದ ಕಿರುಚಿತ್ರಕ್ಕೆ ₹ 4.5 ಕೋಟಿ!

ಕೈಗಾರಿಕಾ ಇಲಾಖೆ ಒಪ್ಪಂದಕ್ಕೆ ಸಚಿವ ಮುರುಗೇಶ ನಿರಾಣಿ ತಡೆ
Last Updated 23 ಅಕ್ಟೋಬರ್ 2022, 15:28 IST
ಅಕ್ಷರ ಗಾತ್ರ

ಬೆಂಗಳೂರು: ನವೆಂಬರ್‌ 2ರಿಂದ 4ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್‌) ಪ್ರದರ್ಶಿಸಲು ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಯತ್ನಕ್ಕೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಡೆಯೊಡ್ಡಿದ್ದಾರೆ.

ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯದ ಲಭ್ಯತೆ ಮತ್ತಿತರ ಅಂಶಗಳನ್ನು ವಿವರಿಸುವ ಐದು ನಿಮಿಷಗಳ ಕಿರುಚಿತ್ರ ನಿರ್ಮಿಸಿ, ಜಿಮ್‌ನಲ್ಲಿ ಪ್ರದರ್ಶಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿತ್ತು. ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಖಾಸಗಿ ಸಂಸ್ಥೆಯೊಂದರ ಜತೆ ಇಲಾಖೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ತ್ರಿ–ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕಿರುಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿತ್ತು.

ದುಬಾರಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸುವ ಪ್ರಸ್ತಾವದ ಕುರಿತು ಕೈಗಾರಿಕಾ ಸಚಿವರಿಗೆ ಅಧಿಕಾರಿಗಳು ಮಾಹಿತಿಯನ್ನೇ ನೀಡಿರಲಿಲ್ಲ. ತಮ್ಮ ಹಂತದಲ್ಲೇ ನಿರ್ಧಾರ ಕೈಗೊಂಡಿರುವ ಅಧಿಕಾರಿಗಳು, ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆಯ್ಕೆಮಾಡಿ, ಒಪ್ಪಂದ ಮಾಡಿಕೊಂಡಿದ್ದರು. ಗೋಪ್ಯವಾಗಿ ಈ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಇದೇ 21ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಪತ್ರ ಬರೆದಿರುವ ಸಚಿವರು, ಕಿರುಚಿತ್ರ ನಿರ್ಮಾಣ ಯೋಜನೆ ರದ್ದು ಮಾಡುವಂತೆ ಸೂಚಿಸಿದ್ದಾರೆ.

‘₹ 4.5 ಕೋಟಿ ವೆಚ್ಚದಲ್ಲಿ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕೆ ಚಿತ್ರ ನಿರ್ಮಾಣ ಸಂಸ್ಥೆಯೊಂದರ ಜತೆ ಕೈಗಾರಿಕಾ ಇಲಾಖೆಯು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ. ಕಿರುಚಿತ್ರ ನಿರ್ಮಾಣಕ್ಕೆ ನಿಗದಿಪಡಿಸಿರುವ ಈ ಮೊತ್ತವು ತುಂಬಾ ಹೆಚ್ಚಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಇದು ಅನಗತ್ಯ ಮತ್ತು ಸೂಕ್ತವಾಗಿರುವುದಿಲ್ಲ. ಇಲಾಖೆಯು ಇಂತಹ ಒಪ್ಪಂದ ಮಾಡಿಕೊಂಡಿದ್ದಲ್ಲಿ ಕಾರ್ಯಾದೇಶವನ್ನು ವಜಾ ಮಾಡಲು ಸೂಚಿಸಿದೆ’ ಎಂದು ನಿರಾಣಿ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.

ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳ ಜತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಆಯುಕ್ತರ ಹಂತದಲ್ಲೇ ತೀರ್ಮಾನ?: ಕಿರುಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ‍ಪ್ರಸ್ತಾವವನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರ ಹಂತದಲ್ಲೇ ಅಂತಿಮಗೊಳಿಸಲಾಗಿತ್ತು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೂ ತಂದಿರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ ಅವರಿಂದ ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ, ಮೊಬೈಲ್‌ ಕರೆ, ಎಸ್‌ಎಂಎಸ್‌, ವಾಟ್ಸ್‌ ಆ್ಯಪ್‌ ಸಂದೇಶಗಳಿಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

‘ಕಾರ್ಯಾದೇಶ ರದ್ದತಿಗೆ ಕ್ರಮ’

‘₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸುವ ಯೋಜನೆ ಕೈಬಿಡುವಂತೆ ಕೈಗಾರಿಕಾ ಸಚಿವರು ಬರೆದ ಪತ್ರ ಶುಕ್ರವಾರ ಸಂಜೆ ನನಗೆ ತಲುಪಿದೆ. ಶನಿವಾರದಿಂದ ಮೂರು ದಿನಗಳ ಕಾಲ ಸರ್ಕಾರಿ ರಜೆಗಳಿವೆ. ಕಿರುಚಿತ್ರ ನಿರ್ಮಾಣ ಯೋಜನೆ ರದ್ದುಗೊಳಿಸಿ ಮಂಗಳವಾರವೇ ಆದೇಶ ಹೊರಡಿಸಲಾಗುವುದು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ನ್ಯಾಯಾಂಗ ತನಿಖೆಗೆ ಆಗ್ರಹ

‘ಸರ್ಕಾರಿ ಶಾಲೆಗಳ ನಿರ್ವಹಣೆಗೆ ಅನುದಾನ ಕಡಿತಗೊಳಿಸಿ ಪೋಷಕರಿಂದ ಹಣ ವಸೂಲಿ ಮಾಡಲು ಸರ್ಕಾರ ಹೊರಟಿದೆ. ಇದೇ ಸಂದರ್ಭದಲ್ಲಿ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕೆ ₹ 4.5 ಕೋಟಿ ವೆಚ್ಚ ಮಾಡಲು ಹೊರಟಿದೆ. ಸಚಿವರ ಗಮನಕ್ಕೂ ತಾರದೆ ಕೈಗೊಂಡಿರುವ ನಿರ್ಧಾರದ ಹಿಂದೆ ಹಣ ಲೂಟಿಯ ಹುನ್ನಾರವಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್‌. ದೀಪಕ್‌ ಆರೋಪಿಸಿದ್ದಾರೆ.

‘ಲೂಟಿ ಮಾಡುವುದಕ್ಕಾಗಿಯೇ ಜಿಮ್‌ ನಡೆಸಲಾಗುತ್ತಿದೆ. ಕಿರುಚಿತ್ರ ನಿರ್ಮಾಣದ ಕುರಿತು ಸಮಗ್ರವಾಗಿ ನ್ಯಾಯಾಂಗ ತನಿಖೆ ನಡೆಸಬೇಕು. ಈವರೆಗೆ ನಡೆಸಿರುವ ಜಿಮ್‌ಗಳ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT