ಗುರುವಾರ , ಆಗಸ್ಟ್ 11, 2022
21 °C
₹10,904 ಕೋಟಿ ವೆಚ್ಚದ 33 ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕು ಸ್ಥಾಪನೆ

ಕಬ್ಬು, ಭತ್ತಕ್ಕೆ ಶೀಘ್ರವೇ ಎಥೆನಾಲ್‌ ನೀತಿ: ನಿತಿನ್ ಗಡ್ಕರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರ ಸದ್ಯವೇ ಎಥೆನಾಲ್‌ ನೀತಿಯನ್ನು ಪ್ರಕಟಿಸಲಿದ್ದು, ಈ ನೀತಿಯು ಕಬ್ಬು ಮತ್ತು ಭತ್ತ ಬೆಳೆಗಾರರ ಹಿತವನ್ನು ರಕ್ಷಿಸುವ ಆಶಯಗಳನ್ನು ಒಳಗೊಂಡಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ರಾಜ್ಯದಲ್ಲಿ ₹10,904 ಕೋಟಿ ವೆಚ್ಚದಲ್ಲಿ 1,197 ಕಿ.ಮೀ ಉದ್ದದ 33 ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗೆ ವರ್ಚುವಲ್‌ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೇಂದ್ರಕ್ಕೆ ಕಬ್ಬು ಮತ್ತು ಭತ್ತದ ಬೆಳೆಗಾರರ ಸಂಕಷ್ಟದ ಅರಿವಿದೆ. ದೇಶದಲ್ಲಿ ಸಕ್ಕರೆ ಮತ್ತು ಅಕ್ಕಿ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಿದೆ. ರೈತರಿಗೆ ನೆರವಾಗುವ ಉದ್ದೇಶದಿಂದ ಕಬ್ಬು ಮತ್ತು ಅಕ್ಕಿಯಿಂದ ಎಥೆನಾಲ್‌ ತಯಾರಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಅವರು ಹೇಳಿದರು.

ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯವು ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲಿ ₹1,16,144 ಕೋಟಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲಿದೆ. ಭಾರತ್‌ ಮಾಲಾ ಮತ್ತು ಇತರ ಯೋಜನೆಗಳಲ್ಲಿ ₹31,035 ಕೋಟಿ ವೆಚ್ಚದಲ್ಲಿ 19 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.

ಕರಾವಳಿ ತೀರ ಪ್ರದೇಶದಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆ ಹೆಚ್ಚಿಸುವ ಉದ್ದೇಶದಿಂದ ಎಲ್ಲ ಗೋವಾದಿಂದ ಕೇರಳದವರೆಗೆ ಬಂದರುಗಳ ಸಂಪರ್ಕವನ್ನು ಕಲ್ಪಿಸಲಾಗುವುದು. ಬೇಲೆಕೇರಿ, ಕಾರವಾರ ಮತ್ತು ಮಂಗಳೂರು ಮಧ್ಯೆ ₹3,443 ಕೋಟಿ ವೆಚ್ಚದಲ್ಲಿ ಬಂದರು ಸಂಪರ್ಕದ ಕಾರ್ಯ ಚಾಲ್ತಿಯಲ್ಲಿದ್ದು, ಬಹುತೇಕ ಕಾರ್ಯಗಳು ಪೂರ್ಣಗೊಂಡಿವೆ ಎಂದು ಹೇಳಿದರು.

ರಸ್ತೆ ಸುರಕ್ಷಿತ ಕ್ರಮಗಳ ಭಾಗವಾಗಿ ಕರ್ನಾಟಕದ ಶಿರಾಡಿ, ಚಾರ್ಮಾಡಿ ಮತ್ತು ಸಂಪಾಜೆ ಘಾಟ್‌ ರಸ್ತೆಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲು ₹115 ಕೋಟಿ ಅನುಮೋದನೆ ನೀಡಲಾಗಿದೆ. ಅಲ್ಲದೆ, ದಾಬಸ್‌ಪೇಟೆ ಬಳಿ ಮಲ್ಟಿಮಾಡಲ್ ಲಾಜಿಸ್ಟಿಕ್‌ ಪಾರ್ಕ್‌ ಸ್ಥಾಪಿಸಲು ಸಾಧ್ಯತಾ ವರದಿ ಫೆಬ್ರುವರಿಯಲ್ಲಿ ಕೈಸೇರಲಿದೆ. ಇದರಿಂದ ಲಾಜಿಸ್ಟಿಕ್‌ ದಕ್ಷತೆ ಹೆಚ್ಚಿಸುವುದರ ಜತೆಗೆ ಲಾಜಿಸ್ಟಿಕ್‌ ಖರ್ಚೂ ಕಡಿಮೆ ಆಗಲಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳಿಗೆ ₹1.16 ಲಕ್ಷ ಕೋಟಿ ಹೂಡಿಕೆ ಮಾಡುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಸಿಕ್ಕಿದಂತಾಗುತ್ತದೆ ಎಂದರು.

ಮಳೆ ಮತ್ತು ಪ್ರವಾಹದಿಂದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ ಮೂಲ ಸೌಕರ್ಯಗಳಿಗೆ ಹಾನಿ ಆಗಿರುವುದರಿಂದ ಇದರ ದುರಸ್ತಿಗಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಅವರು ಗಡ್ಕರಿ ಅವರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಲ್ಹಾದ ಜೋಶಿ ಮತ್ತು ಜ.ವಿ.ಕೆ.ಸಿಂಗ್‌, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆಯವರು ವರ್ಚುವಲ್‌ ಮೂಲಕ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು