ಗುರುವಾರ , ಜುಲೈ 29, 2021
23 °C
ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ

ಹಕ್ಕು ಪತ್ರ ಪಡೆಯುವ ದರದಲ್ಲಿ ಶೇ 50ಕ್ಕಿಂತ ಹೆಚ್ಚು ಇಳಿಕೆ: ವಿ.ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ನಗರ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ಪಡೆಯಲು ನಿಗದಿಪಡಿಸಿದ್ದ ದರವನ್ನು ಶೇ 50ಕ್ಕಿಂತ ಹೆಚ್ಚು ಕಡಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ 1873 ಕೊಳೆಗೇರಿಗಳಲ್ಲಿ ವಾಸ ಮಾಡುತ್ತಿರುವ 15,83,134 ಜನರನ್ನು ಒಳಗೊಂಡ 3,12.969 ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಚದರಡಿ ವಿಸ್ತೀರ್ಣದವರೆಗ ಮನೆ ಅಥವಾ ಗುಡಿಸಲು ಹೊಂದಿದ್ದವರಿಗೆ ಹಕ್ಕುಪತ್ರ ಪಡೆಯಲು ಸಾಮಾನ್ಯವರ್ಗದವರಿಗೆ ₹10 ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ(ಎಸ್‌ಸಿಎಸ್‌ಟಿ) ₹5 ಸಾವಿರ ವಿಧಿಸಲಾಗುತ್ತಿತ್ತು. ಅದನ್ನು ಕ್ರಮವಾಗಿ ₹4 ಸಾವಿರ ಹಾಗೂ ₹2 ಸಾವಿರಕ್ಕೆ ಇಳಿಸಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ವಿಸ್ತೀರ್ಣದವರೆಗೂ ಈ ಹಿಂದೆ ಇದ್ದ ₹ 4 ಸಾವಿರ ಹಾಗೂ ಎಸ್‌ಸಿಎಸ್‌ಟಿ ಸಮುದಾಯದವರಿಗೆ ₹2 ಸಾವಿರ ದರವನ್ನು ಕ್ರಮವಾಗಿ ₹2 ಸಾವಿರ ಹಾಗೂ ₹1 ಸಾವಿರಕ್ಕೆ ಇಳಿಸಲಾಗಿದೆ.

ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಕ್ಕುಪತ್ರಗಳನ್ನು ಪಡೆಯಲು 1200 ಚದರ ಅಡಿಗಳವರೆಗೆ ₹3 ಸಾವಿರ ಎಸ್‌ಸಿಎಸ್‌ಟಿ ಸಮುದಾಯದವರಿಗೆ ₹1,500 ನಿಗದಿ ಮಾಡಲಾಗಿತ್ತು. ಅದನ್ನು ಕ್ರಮವಾಗಿ ₹2ಸಾವಿರ ಹಾಗೂ ₹1 ಸಾವಿರಕ್ಕೆ ಇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಹಕ್ಕುಪತ್ರಗಳನ್ನು ಪಡೆದುಕೊಳ್ಳಲು ಈ ಹಿಂದೆ ನಿಗದಿ ಪಡಿಸಿದ್ದ ದರಗಳು ಹೆಚ್ಚಾಗಿದ್ದು, ಬಡ ಕುಟುಂಬಗಳ ಹೊರೆಯನ್ನು ಕಡಿಮೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೋರಲಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಅವರು ಸ್ಪಂದಿಸಿದ್ದು, ಕೊಳೆಗೇರಿಗಳಲ್ಲಿ ವಾಸಿಸುವ ಬಡವರಿಗೆ ಇದರಿಂದ ಸಹಾಯವಾಗಲಿದೆ’ ಎಂದು ಸೋಮಣ್ಣ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು