ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಇದ್ದ 63 ವಿದ್ಯಾರ್ಥಿಗಳಿಗೆ ಉತ್ತಮ ರ‍್ಯಾಂಕ್‌

Last Updated 21 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಸೋಂಕಿನ ಚಿಂತೆ– ಉನ್ನತ ಶಿಕ್ಷಣದ ಕನಸು ಎರಡನ್ನೂ ಸಂಭಾಳಿಸಿದ ವಿದ್ಯಾರ್ಥಿಗಳು ಈ ಎರಡೂ ಪರೀಕ್ಷೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಶುಕ್ರವಾರ ಪ್ರಕಟವಾದ ಸಿಇಟಿ ಫಲಿತಾಂಶದಲ್ಲಿ ಇದನ್ನು ತೋರಿಸಿದೆ.

ಕೊರೊನಾ ಸೋಂಕಿತರಾಗಿದ್ದ 63 ವಿದ್ಯಾರ್ಥಿಗಳು ಸಿಇಟಿಯಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದ್ದಾರೆ. ಈ ವಿದ್ಯಾರ್ಥಿಗಳು 150ರಿಂದ 200 ರ‍್ಯಾಂಕಿಂಗ್‌ನೊಳಗೆ ಸ್ಥಾನ ಪಡೆದಿರುವುದು ಅವರ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ.

‘ಕೊರೊನಾ ಪಾಸಿಟಿವ್‌ ಎಂದಾಗ ನಾನು ಪರೀಕ್ಷೆ ಬರೆಯುತ್ತೇನೆ ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದೆ. ಅದೂ ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಕೋವಿಡ್‌ ಪರೀಕ್ಷೆಯ ಫಲಿತಾಂಶ ಬಂದಿತ್ತು. ಆದರೂ, ಪರೀಕ್ಷೆ ಬರೆಯಲು ನಮಗೆ ಸರ್ಕಾರ ಅವಕಾಶ ನೀಡಿದ್ದು ಸಮಾಧಾನ ತಂದಿತು. ಯಾವುದೇ ಮುಜುಗರ ಅಥವಾ ತೊಂದರೆಯಾಗದ ರೀತಿಯಲ್ಲಿ ನಮಗೆ ವ್ಯವಸ್ಥೆ ಮಾಡಿದ್ದರು. ಹೀಗಾಗಿ, ಉತ್ತಮ ರ‍್ಯಾಂಕ್‌ ಪಡೆಯಲು ಸಾಧ್ಯವಾಯಿತು’ ಎಂದು ಕೋವಿಡ್‌ ಪೀಡಿತರಾಗಿದ್ದ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಆಗಬಾರದು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿತ್ತು. ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಸಹಕಾರದಿಂದ ಪರೀಕ್ಷೆ ಯಶಸ್ವಿಯಾಗಿ ನಡೆಯಿತು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಎಂಜಿನಿಯರಿಂಗ್, ಪಶುವೈದ್ಯಕೀಯ, ಬಿಎಸ್ಸಿ (ಕೃಷಿ), ಬಿ- ಫಾರ್ಮಾ, ಡಿ-ಫಾರ್ಮಾ, ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕೋರ್ಸುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗಿತ್ತು.

ಸಾಯಿವಿವೇಕ್‌ಗೆ ಸಾಧನೆ: ಬೆಂಗಳೂರು ಕೆಂಪಾಪುರದಲ್ಲಿನ ನಾರಾಯಣ ಇ–ಟೆಕ್ನೊ ಕಾಲೇಜಿನ ಪಿ. ಸಾಯಿವಿವೇಕ್‌ ಪಶುವೈದ್ಯಕೀಯ, ಬಿ.ಫಾರ್ಮಾ ಮತ್ತು ಡಿ.ಫಾರ್ಮಾದಲ್ಲಿ ಮೊದಲ ರ‍್ಯಾಂಕ್ ಹಾಗೂ ನ್ಯಾಚುರೋಪಥಿ ಮತ್ತು ಯೋಗವಿಜ್ಞಾನದಲ್ಲಿ ಮೂರನೇ ರ‍್ಯಾಂಕ್‌ ಪಡೆಯುವ ಮೂಲಕ ಗಮನ ಸೆಳೆದರೆ, ರಕ್ಷಿತ್‌ ಎಂ. ಎಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಮೈಸೂರಿನ ಕೆ. ಸಂಜನಾ ಕೂಡ ಮೂರು ವಿಭಾಗಗಳಲ್ಲಿ ಮೊದಲ ಮೂರು ರ‍್ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜೀವವಿಜ್ಞಾನದಲ್ಲಿ 80 ವಿದ್ಯಾರ್ಥಿಗಳು 60ಕ್ಕೆ 60 ಅಂಕ ಗಳಿಸಿ ಗಮನ ಸೆಳೆದರೆ, ರಸಾಯನವಿಜ್ಞಾನದಲ್ಲಿ ಮೂರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ಫಲಿತಾಂಶವನ್ನು ಈ ಲಿಂಕ್‌ಗಳನ್ನು (kea.kar.nic.in, karresults.nic.in)ಬಳಸಿನೋಡಬಹುದು.

ವಿಭಾಗವಾರು ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳು
1,53,470:ಎಂಜಿನಿಯರಿಂಗ್‌ ಕೋರ್ಸ್‌
1,27,627:ಬಿಎಸ್‌ಸಿ ಕೃಷಿ
1,29,666:ಪಶುವೈದ್ಯ ವಿಜ್ಞಾನ
1,55,552:ಬಿ-ಫಾರ್ಮಾ, ಡಿ-ಫಾರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT