ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರಿ ಸಾಹುಕಾರನ ಜೇಬಿನಲ್ಲಿ: ಜನರೂಢಿಯ ಮಾತು

ರುದ್ರಗೌಡ ಅವರ ಊರು ಸೊನ್ನ ಗ್ರಾಮದಲ್ಲಿ ಜನರೂಢಿಯ ಮಾತು
Last Updated 30 ಏಪ್ರಿಲ್ 2022, 2:14 IST
ಅಕ್ಷರ ಗಾತ್ರ

ಸೊನ್ನ (ಕಲಬುರಗಿ ಜಿಲ್ಲೆ): ‘ನಮ್ಮೂರಿನ ಮಂದಿಗೆ ಸರ್ಕಾರಿ ನೌಕರಿ ಅಂದರ ಕಿಸೆದಾಗಿನ ಮಾತು. ಇಲ್ಲಿ ಮಾತ್ರವಲ್ಲ; ಅಫಜಲಪುರ ಪಟ್ಟಣದಾಗ ಯಾರನ್ನಾದರೂ ಸರ್ಕಾರಿ ನೌಕರಿ ಎಲ್ಲಿ ಸಿಗತಾವ ಅಂತ ಕೇಳಿ ನೋಡ್ರಿ. ಸೊನ್ನ ಸಾಹುಕಾರನ ಕಿಸೆದಾಗ ಐತಿ ಅಂತಾರ...’

ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಜನರೂಢಿ ಮಾತಿದು. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಎದುರಿಸುತ್ತಿರುವ ರುದ್ರಗೌಡ ಡಿ. ಪಾಟೀಲ ಅವರ ಸ್ವಂತ ಊರು ಇದು.

‘ಪ್ರಜಾವಾಣಿ’ ವರದಿಗಾರ ಈ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಕೆಲ ಆಸಕ್ತಿದಾಯಕ ವಿಷಯಗಳನ್ನು ಹೊರಹಾಕಿದರು.

ಅಫಜಲಪುರದ ಬಸವೇಶ್ವರ ವೃತ್ತದಲ್ಲಿ ರುದ್ರಗೌಡ ಅವರ 20 ಅಡಿಯ ದೊಡ್ಡ ಕಟೌಟ್‌ ಇನ್ನೂ ರಾರಾಜಿಸುತ್ತಿದೆ. ಈ ಹಿಂದೆ ನಡೆದ ಸಾಮೂಹಿಕ ವಿವಾಹ, ಜಾತ್ರೆ, ಕ್ರೀಡೆಗಳ ಪೋಸ್ಟರ್‌ ಬ್ಯಾನರ್‌ಗಳು ಸುತ್ತಲಿನ ಹಳ್ಳಿಗಳಲ್ಲೂ ಇವೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಚಿನ್ನ, ಹಣದ ರೂಪದ ಬಹುಮಾನ ನೀಡಿದ ಯುವನಾಯಕ ಎಂದು ಅದರಲ್ಲಿ ಬರೆಯಲಾಗಿದೆ.

ಸಿಐಡಿ ವಶದಲ್ಲಿರುವ ರುದ್ರಗೌಡ ಹಾಗೂ ಅವರ ಅಣ್ಣ ಮಹಾಂತೇಶ ಅವರ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಿದೆ. 2000ನೇ ಇಸ್ವಿ ವೇಳೆಗೆ ಅಣ್ಣ– ತಮ್ಮ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. ಮಹಾಂತೇಶ ಮೂರು ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ.2000 ಹಾಗೂ 2005ರಲ್ಲಿ ಜೆಡಿಎಸ್‌ನಿಂದ, ನಂತರ ಕಾಂಗ್ರೆಸ್‌ ಸೇರಿ2010ರಲ್ಲಿ ಕರಜಗಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ರುದ್ರಗೌಡ ಕೂಡ ಒಮ್ಮೆ ಅಫಜಲಪುರ ತಾಲ್ಲೂಕು ಪಂಚಾಯಿತಿಯ ಬಂಕಲಗಾ ಕ್ಷೇತ್ರದಲ್ಲಿ ಸೋತಿದ್ದಾರೆ. 2014–15ರಲ್ಲಿಗೌರ (ಬಿ) ಗ್ರಾಮ ಪಂಚಾಯಿತಿಗೆ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು.

ಚುನಾವಣೆಗಳಲ್ಲಿ ಪದೇಪದೇ ಸೋಲಾಗಿದ್ದರಿಂದ ಸಾಕಷ್ಟು ಸಾಲ ಮಾಡಿದ್ದರು. ಅದನ್ನು ತೀರಿಸಲು ಹಿರಿಯರಿಂದ ಬಂದ ಆಸ್ತಿ ಮಾರಿದ್ದಾರೆ.ಇದಾದ ಬಳಿಕ ಕೇವಲ ಎಂಟು ವರ್ಷಗಳ ಅವಧಿಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ಬೆಳೆದಿದ್ದಾರೆ. ಸದ್ಯ ಸೊನ್ನ ಗ್ರಾಮದಲ್ಲಿ ಒಂದು ಹಳೆಯ ಮನೆ, ಒಂದಷ್ಟು ಹೊಲ ಇದೆ. ಅಫಜಲಪುರದಲ್ಲಿ ಒಂದು, ಕಲಬುರಗಿಯಲ್ಲಿ ಎರಡು ಮನೆಗಳಿವೆ ಎಂದು ಕೆಲವರು ಹೇಳಿದರು.

ಅಫಜಲಪುರ ಸಮೀಪದ ಮಲ್ಲಾಬಾದ್‌ ಗ್ರಾಮದಲ್ಲಿ ಮಹಾಂತೇಶ ಅವರು ಜ್ಞಾನಭಾರತಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದಾರೆ. ಸಿದ್ಧಾರ್ಥ ಪ್ರೌಢಶಾಲೆ, ದೇವರಾಜ ಅರಸು ಪದವಿಪೂರ್ವ ಕಾಲೇಜು, ಮಹಾಲಕ್ಷ್ಮಿ ಪ್ಯಾರಾಮೆಡಿಕಲ್‌ ಕಾಲೇಜು, ಮಹಾಂತೇಶಗೌಡ ಪಾಟೀಲ ನರ್ಸಿಂಗ್‌ ಸ್ಕೂಲ್‌ ಇಲ್ಲಿವೆ.

‘ನೀವೇನ್‌ ಸಿಐಡಿ ಆಫೀಸಿನವರಾ?’

ಸೊನ್ನ ಗ್ರಾಮದಲ್ಲಿ ಯಾರೇ ಹೊಸದಾಗಿ ಬಂದರೂ ಜನ ಅನುಮಾನದಿಂದಲೇ ನೋಡುತ್ತಿದ್ದಾರೆ. ‘ಗೌಡರ ಮನೆತನ ಹೇಗೆ’ ಎಂದು ಕೇಳಿದ ತಕ್ಷಣ ‘ನೀವೇನ್‌ ಸಿಐಡಿ ಆಫೀಸಿನವರಾ’ ಎಂದು ಮರುಪ್ರಶ್ನೆ ಮಾಡಿದರು.

ಸೊನ್ನದಲ್ಲಿನ ಅವರ ಹಳೆಯ ಮನೆಯ ಸುತ್ತ ಕೆಲವರು ಗುಂಪಾಗಿ ಕುಳಿತಿದ್ದರು.

‘ಈ ಸಾರಿ ಎಂಎಲ್‌ಎ ಆಗುವ ಲೆವಲ್‌ಗೆ ರುದ್ರಗೌಡ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಯುವಕರ ದೊಡ್ಡ ಗುಂಪೇ ಅವರೊಂದಿಗಿದೆ. ಈ ಅಕ್ರಮದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳೂ ಇರಬಹುದು. ರುದ್ರಗೌಡರು ಎಲೆಕ್ಷನ್‌ಗೆ ನಿಲ್ಲಬಾರದು ಎಂದು ಉಪಾಯ ಮಾಡಿ ಹೀಗೆಲ್ಲ ಮಾಡಿಸಿದ್ದಾರೆ’ ಎಂದು ಕೆಲವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT