ಮಂಗಳವಾರ, ಜನವರಿ 25, 2022
25 °C
ಇನ್ನೆರಡು ಪ್ರಯೋಗಾಲಯಗಳಿಗೆ ಶೀಘ್ರ ಮಾನ್ಯತೆ?

ಜಿನೋಮ್‌ ಸೀಕ್ವೆನ್ಸಿಂಗ್: ಎರಡೇ ದಿನದಲ್ಲಿ ಫಲಿತಾಂಶ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ದೃಢಪಟ್ಟವರು ಓಮೈಕ್ರಾನ್‌ ಸೋಂಕು ಹೊಂದಿದ್ದರೇ ಎಂಬುದನ್ನು ದೃಢಪಡಿಸಿಕೊಳ್ಳಲು
ನಡೆಸುವ ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್‌ ಸೀಕ್ವೆನ್ಸಿಂಗ್) ಸದ್ಯಕ್ಕೆ ಒಂದು ವಾರಕ್ಕೂ ಅಧಿಕ ಸಮಯ ತಗಲುತ್ತಿದೆ. ಇದನ್ನು ಇನ್ನಷ್ಟು ಕಡಿಮೆ ಮಾಡಿ, ಎರಡೇ ದಿನಗಳಲ್ಲಿ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ.

ಜಿನೋಮ್‌ ಸೀಕ್ವೆನ್ಸಿಂಗ್‌ ಫಲಿತಾಂಶ ಬರುವುದಕ್ಕೆ ವಿಳಂಬವಾಗುತ್ತಿರುವುದು ಕೂಡಾ ಓಮೈಕ್ರಾನ್ ಸೋಂಕು ಹರಡದಂತೆ ನಿಯಂತ್ರಿಸುವ ಸವಾಲನ್ನು ಇನ್ನಷ್ಟು ಕಠಿಣಗೊಳಿಸಿದೆ. ಜಿನೋಮ್‌ ಸೀಕ್ವೆನ್ಸಿಂಗ್‌ ಫಲಿತಾಂಶವು ತ್ವರಿತವಾಗಿ ಸಿಕ್ಕಿದರೆ, ಅಗತ್ಯ ಇರುವ ಕಡೆಗಳಲ್ಲಿ ಸೋಂಕು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವುದು ಸುಲಭವಾಗಲಿದೆ ಎನ್ನುವುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯ.

ಸದ್ಯಕ್ಕೆ ಕೋವಿಡ್‌ ದೃಢಪಟ್ಟವರ ಮಾದರಿಗಳನ್ನು ನಗರದ ನಿಮ್ಹಾನ್ಸ್‌ನ ಪ್ರಯೋಗಾಲಯ ಹಾಗೂ ಜಿ.ಕೆ.ವಿ.ಕೆ ಬಳಿ ಇರುವ ರಾಷ್ಟ್ರೀಯ ಜೀವವಿಜ್ಞಾನಗಳ ಕೇಂದ್ರದ  (ಎನ್‌ಸಿಬಿಎಸ್‌) ಪ್ರಯೋಗಾಲಯಗಳಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗುತ್ತಿದೆ. ಈ ಹಿಂದೆ ಇದರ ಫಲಿತಾಂಶ ಬಿಬಿಎಂಪಿ ಕೈಸೇರಲು ಎರಡು ತಿಂಗಳು ತೆಗೆದುಕೊಳ್ಳುತ್ತಿತ್ತು. ನಂತರ ಈ ಅವಧಿಯು ಎರಡು ವಾರಗಳಿಗೆ
ಇಳಿದಿತ್ತು.

‘ಜಿನೋಮ್‌ ಸೀಕ್ವೆನ್ಸಿಂಗ್‌ನ ಫಲಿತಾಂಶವನ್ನು ಐದರಿಂದ ಏಳು ದಿನಗಳಲ್ಲಿ ಪಡೆಯುವಂತಹ ವ್ಯವಸ್ಥೆ ಸದ್ಯಕ್ಕೆ ಇದೆ. ಈ ಅವಧಿಯನ್ನು ಇನ್ನಷ್ಟು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರಯೋಗಾಲಯಗಳಿಗೆ ಹೊಸ ಯಂತ್ರಗಳನ್ನು ಖರೀದಿಸುವ ಹಾಗೂ ಅನೇಕ ಮಾದರಿಗಳನ್ನು ಒಟ್ಟೊಟ್ಟಿಗೆ ಪರೀಕ್ಷೆಗೆ ಒಳಪಡಿಸುವ ಮೂಲಕ ತ್ವರಿತವಾಗಿ ಫಲಿತಾಂಶ ಪಡೆಯುವ ಪ್ರಯತ್ನಗಳೂ ನಡೆದಿವೆ. ವೈರಾಣು ಮಾದರಿಗಳ ವಂಶವಾಹಿ ಸಂರಚನೆ ವಿಶ್ಲೇಷಣೆ ನಡೆಸುವ ನಾಲ್ಕು ಪ್ರಯೋಗಾಲಯಗಳು ನಗರದಲ್ಲಿವೆ. ಹಿಂದೆ ನಗರದ ಒಂದು ಪ್ರಯೋಗಾಲಯದಲ್ಲಿ ಮಾತ್ರ ಈ ವಿಶ್ಲೇಷಣೆ ನಡೆಸಲಾಗುತ್ತಿತ್ತು. ಈಗ ಅವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗುತ್ತಿದೆ.’

‘ಈ ವಿಶ್ಲೇಷಣೆ ನಡೆಸಲು ಇಂಡಿಯನ್‌ ಸಾರ್ಸ್‌ ಕೋವಿಡ್‌–2 ಜಿನೋಮಿಕ್‌ ಸೀಕ್ವೆನ್ಸಿಂಗ್‌
ಕನ್ಸೋರ್ಟಿಯಂನಿಂದ (ಇನ್‌ಸೆಕಾಗ್‌) ಮಾನ್ಯತೆ ಪಡೆಯಬೇಕು. ನಗರದಲ್ಲಿರುವ ಎರಡು ಖಾಸಗಿ ಪ್ರಯೋಗಾಲಯಗಳಿಗೂ ಇನ್‌ಸೆಕಾಗ್‌ ಮಾನ್ಯತೆ ಸಿಗುವ ನಿರೀಕ್ಷೆ ಇದೆ. ಆಗ ಫಲಿತಾಂಶ ಇನ್ನೂ ಬೇಗ ಸಿಗಲಿದೆ’ ಎಂದು ಅವರು ವಿವರಿಸಿದರು.

‘ಸದ್ಯಕ್ಕೆ ನಗರದಲ್ಲಿ ನಿತ್ಯ 750 ಮಾದರಿಗಳನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸುವಷ್ಟು ಸೌಕರ್ಯ ಇದೆ. ವೈರಾಣು ವಿಜ್ಞಾನಿಗಳ ಪ್ರಕಾರ ಈ ವಿಶ್ಲೇಷಣೆಯನ್ನು ಪೂರ್ಣಗೊಳಿಸಲು ಕನಿಷ್ಠ 72 ತಾಸು ಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ತ್ವರಿತಗೊಳಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ. ಹಾಗಾಗಿ ಫಲಿತಾಂಶ ಕೈ ಸೇರುವ ಸಮಯ ಇನ್ನಷ್ಟು ಕಡಿಮೆಯಾಗಲಿದೆ. ಮಾದರಿಗಳನ್ನು ಕಳುಹಿಸಿದ ಎರಡೇ ದಿನಗಳಲ್ಲಿ ಫಲಿತಾಂಶ ಸಿಗುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು