ಮಂಗಳವಾರ, ಜನವರಿ 19, 2021
27 °C
ಅರ್ಜಿ ಸಲ್ಲಿಸಿದ್ದ 75 ಸಾವಿರಕ್ಕೂ ಹೆಚ್ಚು ಶಿಕ್ಷಕರಲ್ಲಿ ನಿರಾಶೆ

‘ಯಥಾಸ್ಥಿತಿ’ಗೆ ಕೆಎಟಿ ಆದೇಶ: ಶಿಕ್ಷಕರ ವರ್ಗಾವಣೆ ಅತಂತ್ರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವರ್ಗಾವಣೆ ಕಾಯ್ದೆಯಲ್ಲಿ ನಿಯಮ ಇಲ್ಲದಿದ್ದರೂ 2019–20ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ ‘ಶಿಕ್ಷೆ’ಗೆ ಒಳಗಾದ ಶಿಕ್ಷಕರಿಗೆ ಪ್ರಸಕ್ತ ಸಾಲಿನ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿಶೇಷ ಆದ್ಯತೆ ನೀಡಲು ಮುಂದಾದ ರಾಜ್ಯ ಸರ್ಕಾರ, ‘ಯಥಾಸ್ಥಿತಿ’ ಕಾಯ್ದುಕೊಳ್ಳಬೇಕೆಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶದಿಂದ ಅಡಕತ್ತರಿಯಲ್ಲಿ ಸಿಲುಕಿದೆ.

2016–17 ರಲ್ಲಿ ಹೆಚ್ಚುವರಿ ವರ್ಗಾವಣೆಗೊಂಡು ಹೊರ ತಾಲ್ಲೂಕಿಗೆ ಹೋಗಿರುವ ಕೆಲವು ಶಿಕ್ಷಕರು ತಮ್ಮನ್ನು ಬಿಟ್ಟು 2019–20ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಕೌನ್ಸೆಲಿಂಗ್‌ನಲ್ಲಿ ಆದ್ಯತೆ ನೀಡಿರುವುದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು.

ಕೆಎಟಿ ಆದೇಶದಿಂದಾಗಿ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿ, ಕೌನ್ಸೆಲಿಂಗ್‌ನ ನಿರೀಕ್ಷೆಯಲ್ಲಿದ್ದ 75 ಸಾವಿರಕ್ಕೂ ಹೆಚ್ಚು ಶಿಕ್ಷಕರಲ್ಲಿ ತೀವ್ರ ನಿರಾಶೆ ಉಂಟಾಗಿದೆ. ಅಲ್ಲದೆ, ಈ ಬಾರಿಯೂ ವರ್ಗಾವಣೆ ಪ್ರಕ್ರಿಯೆ ನನೆಗುದಿಗೆ ಬೀಳಬಹುದೆಂಬ ಆತಂಕವೂ ಎದುರಾಗಿದೆ.

2019–20 ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಮೊದಲು ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆಯಲ್ಲಿ ಆದ್ಯತೆ ನೀಡುವ ನಿಯಮ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020’ಯಲ್ಲಿ ಇಲ್ಲ. ಆದರೆ, ನ. 11ರಂದು ಹೊರಡಿಸಿರುವ ವರ್ಗಾವಣೆ ಅಧಿಸೂಚನೆಯಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ‘ಕಾಯ್ದೆಯಲ್ಲಿ ಇಲ್ಲದಿದ್ದರೂ, 2019–20ರ ಸಾಲಿನವರಿಗೆ ಆದ್ಯತೆ ನೀಡುವುದಾದರೆ ನಮಗೂ ಆದ್ಯತೆ ನೀಡಬೇಕು’ ಎಂದು 2016–17 ರಲ್ಲಿ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾಲೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎನ್‌. ಮಹೇಶ್ವರಪ್ಪ ಸೇರಿ ಎಂಟು ಶಿಕ್ಷಕರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರಿನ ಕೆಎಟಿ ಪೀಠ ‘ಯಥಾಸ್ಥಿತಿ’ ಕಾಪಾಡುವಂತೆ ಆದೇಶ ನೀಡಿದ ಬೆನ್ನಲ್ಲೆ, ಇತರ ವಿಭಾಗಗಳಲ್ಲೂ 2016– 17 ರಲ್ಲಿ ಹೆಚ್ಚುವರಿ ಕಾರಣಕ್ಕೆ ಹೊರ ತಾಲ್ಲೂಕಿಗೆ ವರ್ಗಾವಣೆಯಾದ ಶಿಕ್ಷಕರು ಆಯಾ ವಿಭಾಗದ ಕೆಎಟಿ ಮೊರೆ ಹೋಗಿದ್ದಾರೆ. ಕಲಬುರ್ಗಿ ಪೀಠ ಕೂಡಾ ‘ಯಥಾಸ್ಥಿತಿ’ ಕಾಪಾಡುವಂತೆ ಡಿ.26 ಕ್ಕೆ ಆದೇಶ ನೀಡಿದ್ದು, ವಿಚಾರಣೆಯನ್ನು ಫೆ. 17ಕ್ಕೆ ಮುಂದೂಡಿದೆ.

ಅಧಿಕಾರಿಗಳ ನಿರ್ಲಕ್ಷ್ಯ– ಆರೋಪ: ವರ್ಗಾವಣೆ ಪ್ರಕ್ರಿಯೆ ಕೆಎಟಿ ಮೆಟ್ಟಿಲೇರಲು ಕಾಯ್ದೆ ರೂಪಿಸುವ ಮತ್ತು ಅಧಿಸೂಚನೆ ಹೊರಡಿಸುವ ವೇಳೆ ಅಧಿಕಾರಿಗಳು ತೋರಿಸಿದ ನಿರ್ಲಕ್ಷ್ಯವೂ ಕಾರಣ ಎಂಬ ಆರೋಪವೂ ಶಿಕ್ಷಕರ ವಲಯದಲ್ಲಿ ಕೇಳಿಬಂದಿದೆ. ಕೆಎಟಿ ನೀಡಿರುವ ಆದೇಶ ತೆರವುಗೊಳಿಸಿ, ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಅಡ್ವೊಕೇಟ್‌ ಜನರಲ್‌ ಮತ್ತು ಇಲಾಖೆಯ ನಿರ್ದೇಶಕರ ಜೊತೆ ಚರ್ಚಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ನಿರ್ಧರಿಸಿದ್ದಾರೆ. ಕೆಎಟಿ ತೀರ್ಪು ಸರ್ಕಾರದ ವಿರುದ್ಧ ಬಂದರೆ ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಬಗ್ಗೆಯೂ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

‘ನಮಗೂ ಆದ್ಯತೆ ನೀಡಬೇಕು’:

‘ಹೆಚ್ಚುವರಿ ವರ್ಗಾವಣೆಯಿಂದ ಕಡೂರಿನಿಂದ ಮೂಡಿಗೆರೆ ತಾಲ್ಲೂಕಿಗೆ ವರ್ಗಾವಣೆಯಾಗಿರುವ ನಾನು, ನಾಲ್ಕೂವರೆ ವರ್ಷಗಳಿಂದ ನಿತ್ಯ ಮನೆ–ಶಾಲೆ ನಡುವೆ 170 ಕಿ.ಮೀ. ಓಡಾಡುತ್ತಿದ್ದೇನೆ. 2016–17ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನನ್ನಂತೆ, ಹೊರ ತಾಲ್ಲೂಕಿಗೆ 120 ಶಿಕ್ಷಕರಿಗೆ ವರ್ಗಾವಣೆಯಾಗಿತ್ತು. ಈ ಪೈಕಿ 30 ಮಂದಿ ಆಯಾ ತಾಲ್ಲೂಕಿಗೆ ವಾಪಸಾಗಿದ್ದಾರೆ. ನಮ್ಮ ವರ್ಗಾವಣೆ ವೇಳೆ ಕಾನೂನು ಕೂಡಾ ಉಲ್ಲಂಘಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆದಿದ್ದರೂ ನ್ಯಾಯ ಸಿಕ್ಕಿಲ್ಲ. ಈ ಬಗ್ಗೆ ನಾವು ಹಲವು ಬಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಬಿ.ಎನ್‌. ಮಹೇಶ್ವರಪ್ಪ ಅಳಲು ತೋಡಿಕೊಂಡರು.

* ವರ್ಗಾವಣೆ ಪ್ರಕ್ರಿಯೆಗೆ ಕೆಎಟಿ ನೀಡಿರುವ ತಡೆ ತೆರವಿಗೆ ಸಂಬಂಧಿಸಿ ಅಡ್ವೊಕೇಟ್‌ ಜನರಲ್‌ ಮತ್ತು ಇಲಾಖೆಯ ನಿರ್ದೇಶಕರ ಜೊತೆ ಚರ್ಚಿಸುತ್ತೇನೆ.

– ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು