ಬುಧವಾರ, ನವೆಂಬರ್ 30, 2022
16 °C

ಸರ್ಕಾರ ಸತ್ತಿದೆ, ಸಿಎಂ ಬೊಮ್ಮಾಯಿ ಅಸಮರ್ಥ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರಾಜ್ಯದಲ್ಲಿ ಅನೈತಿಕವಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಮರ್ಥರಾಗಿದ್ದು, ಆರ್‌ಎಸ್‌ಎಸ್‌ ಕೈಗೊಂಬೆಯಾಗಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಈಗ ಘೋಷಿಸುತ್ತಿರುವ ಯೋಜನೆಗಳಿಗೆ ಹಣವೇ ಇಲ್ಲ’ ಎಂದು ಟೀಕಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಅವರ ಪ್ರಣಾಳಿಕೆಯಲ್ಲಿದ್ದ ಭರವಸೆಗಳಲ್ಲಿ ಶೇ 10ರಷ್ಟನ್ನೂ ಈಡೇರಿಸಿಲ್ಲ. ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧವಿದ್ದೇನೆ. ಬಿಜೆಪಿಯವರು ಬರಲಿ’ ಎಂದು ಸವಾಲೆಸೆದರು.

ಸಾಮಾಜಿಕ ನ್ಯಾಯ ಸಾಧ್ಯವೇ?:

‘ಕೇಂದ್ರ ಸರ್ಕಾರ ಒಪ್ಪಿದರೆ ಬಡವರಿಗೆ ಉಚಿತವಾಗಿ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಸಚಿವ ಉಮೇಶ್‌ ಕತ್ತಿ ಈಚೆಗೆ ಹೇಳಿದ್ದಾರೆ. ಅಕ್ಕಿ ಕೊಡಲು ದುಡ್ಡಿಲ್ಲದಿರುವುದು ಅಥವಾ ಬಡವರ ಬಗ್ಗೆ ಕಾಳಜಿ ಇಲ್ಲದಿರುವುದೇ ಆ ಹೇಳಿಕೆಗೆ ಕಾರಣ’ ಎಂದರು.

‘ವರ್ಗಾವಣೆಗೆ ಬೆಲೆ ನಿಗದಿಪಡಿಸಲಾಗಿದೆ. ಎಸ್ಪಿಯಿಂದ ಹಿಡಿದು ಕಾನ್‌ಸ್ಟೆಬಲ್‌ಗಳವರೆಗೆ ಒಂದೊಂದು ಬೆಲೆ ನಿಗದಿಪಡಿಸಿದ್ದಾರೆ. ವರ್ಗಾವಣೆಯಾದ ವರ್ಷದಲ್ಲಿ ಎಷ್ಟಾದರೂ ಹಣ ಹೊಡೆಯಿರಿ ಎಂದು ಅವರಿಗೆ ಅವಕಾಶ ಕೊಟ್ಟಿದ್ದಾರೆ’ ಎಂದು ಟೀಕಿಸಿದರು.

ಹಂಚಿಕೆ ಹೀಗಿದೆ...:

‘ಲೋಕೋಪಯೋಗಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸೇರಿ ₹ 22ಸಾವಿರ ಕೋಟಿ ಬಿಲ್‌ ಬಿಡುಗಡೆಗೆ ಬಾಕಿ ಇದೆ. ಶೇ 40ರಷ್ಟು ಸರ್ಕಾರಕ್ಕೆ, ಶೇ 20ರಷ್ಟು ಗುತ್ತಿಗೆದಾರನಿಗೆ ಹೋಗುತ್ತದೆ. ಶೇ 15ರಷ್ಟು ಜಿಎಸ್‌ಟಿ ಕಟ್ಟಬೇಕು. ಉಳಿದ ಶೇ 25ರಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗಿದ್ದಾಗ ಗುಣಮಟ್ಟ ಸಾಧ್ಯವೇ, ಸಕಾಲದಲ್ಲಿ ಪೂರ್ಣಗೊಳಿಸಲಾಗುತ್ತದೆಯೇ?’ ಎಂದು ಕೇಳಿದರು.

‘ಈ ಸರ್ಕಾರದಲ್ಲಿ ಒಂದಾದರೂ ಮನೆ ಮಂಜೂರು ಮಾಡಿ ಕಟ್ಟಿಸಿದ ಉದಾಹರಣೆ ಇದ್ದರೆ, ಬಡವರಿಗೆ ನಿವೇಶನ ಕೊಟ್ಟಿದ್ದರೆ ತೋರಿಸಲಿ. ಮೂರು ವರ್ಷದಿಂದ ರಾಜಸ್ವ ಕೊರತೆ ಉಂಟಾಗಿದೆ. ನಾವು ₹20ಸಾವಿರಿಂದ ₹22ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದ್ದೆವು. ಈ ವರ್ಷ ಈ ಸರ್ಕಾರ ₹ 80ಸಾವಿರ ಕೋಟಿ ಸಾಲ ಮಾಡಿದೆ’ ಎಂದು ತಿಳಿಸಿದರು.

‘ಎಸ್‌ಸಿಪಿ/ಟಿಎಸ್‌ಪಿ ಯೋಜನೆಗೆ ನೀಡಿದ್ದ ಅನುದಾನದಲ್ಲಿ ₹ 7,885 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿದೆ. ಸರ್ಕಾರ ಎಲ್ಲಿದೆ? ಈ ಕಾರಣಕ್ಕಾಗಿಯೇ ಸಚಿವ ಮಾಧುಸ್ವಾಮಿ ‘ಸರ್ಕಾರವಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ’ ಎಂದಿದ್ದಾರೆ. ಇಂಥ ವಿಚಾರಗಳನ್ನು ನಾನು ಮಾತನಾಡಿದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋದರು, ಸಾವರ್ಕರ್‌ಗೆ ಅವಮಾನ ಮಾಡಿದರು ಎನ್ನುತ್ತಾ ಧರ್ಮ, ಜಾತಿ ವಿಚಾರಗಳಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ’ ಎಂದು ದೂರಿದರು.

‘ಮುಚ್ಚಿ ಹಾಕಲಾಗುತ್ತಿದೆ’

‘ತಾವಾಗಿಯೇ ಲಂಚ ಕೊಡುವುದು ಬೇರೆ. ಲಂಚ ನೀಡದಿದ್ದರೆ ಬಿಲ್‌ ಬಿಡುಗಡೆ ಮಾಡುವುದಿಲ್ಲ ಎಂದು ಒತ್ತಡ ಹೇರಿ ಪಡೆಯುವುದು ಬೇರೆ. ಸರ್ಕಾರವೇ ಭ್ರಷ್ಟವಾಗಿರುವುದರಿಂದ ಭ್ರಷ್ಟರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಆರೋಪಿ ಸ್ಥಾನದಲ್ಲಿರುವುದರಿಂದ ಮುಚ್ಚಿ ಹಾಕಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ಎಸಿಬಿ ರದ್ದತಿಗೆ ಸಂಬಂಧಿಸಿ ಹೈಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದೇವೆ. ಭಾಸ್ಕರ್‌ರಾವ್‌ ಲೋಕಾಯುಕ್ತರಾಗಿದ್ದಾಗ ಅವರ ಮಗ ಮನೆಯಲ್ಲೇ ಲಂಚ ವಸೂಲಿ ಮಾಡುತ್ತಿದ್ದ. ಆದ್ದರಿಂದ ಎಸಿಬಿ ರಚಿಸಿದ್ದೆವು. ಬೇರೆ ರಾಜ್ಯಗಳಲ್ಲೂ ಎಸಿಬಿ ಇದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು