ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಅಲೆ ತಗ್ಗಿಸುವಲ್ಲಿ ಸರ್ಕಾರ ರಾಜ್ಯ ಯಶಸ್ವಿ: ವಜುಭಾಯಿ ವಾಲಾ ಬಣ್ಣನೆ

Last Updated 26 ಜನವರಿ 2021, 18:16 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ನಿರ್ವಹಣೆ ಮಾಡುವುದರಲ್ಲಿ ರಾಜ್ಯ ಸರ್ಕಾರ ದೇಶಕ್ಕೇ ಮಾದರಿಯಾಗಿದೆ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಮೆಚ್ಚುಗೆ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವದ ಅಂಗವಾಗಿ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳನ್ನು ಹೊಗಳಿದರು.

‘ಕರ್ನಾಟಕ ಸರ್ಕಾರ ಜನರ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ, ಕೋವಿಡ್‌ ಅಲೆ ತಗ್ಗಿಸುವುದರಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕೋವಿಡ್ ಕೊನೆಯ ಹಂತದಲ್ಲಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ವ್ಯಕ್ತಿಗತ ಅಂತರ ಕಾಪಾಡಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಈ ಮೂರು ಮಂತ್ರಗಳನ್ನು ನಿರಂತರವಾಗಿ ಪಾಲಿಸಬೇಕು’ ಎಂದು ರಾಜ್ಯಪಾಲರು ಕರೆ ನೀಡಿದರು.

‘ಕೋವಿಡ್ ಬಿಕ್ಕಟ್ಟಿನ ಅವಕಾಶವನ್ನು ತಮ್ಮ ಸಾಮರ್ಥ್ಯ ವೃದ್ದಿಸಲು ಹಾಗೂ ಆರೋಗ್ಯ ಮೂಲಸೌಕರ್ಯ, ಪಿಪಿಇ ಕಿಟ್‌, ವೆಂಟಿಲೇಟರ್‌ ಉತ್ಪಾದನೆ ಹೆಚ್ಚಿಸಲು ಬಳಸಿಕೊಂಡಿದೆ. ಇದು ಪ್ರಧಾನಿ ನರೇಂದ್ರ ಮೋದಿ ದೂರದರ್ಶಿತ್ವದ ಆತ್ಮನಿರ್ಭರ ಭಾರತ ಕಾರ್ಯಕ್ರಮದ ದಿಶೆಯಲ್ಲಿ ಒಂದು ಉತ್ತಮ ಹೆಜ್ಜೆ. ಭಾರತವು ಎರಡು ಲಸಿಕೆಗಳನ್ನು ಉತ್ಪಾದಿಸಿರುವುದಲ್ಲದೆ, ಈ ಲಸಿಕೆಯನ್ನು ವಿದೇಶಗಳಿಗೂ ರಫ್ತು ಮಾಡುತ್ತಿರುವುದು ಗಮನಾರ್ಹ’ ಎಂದರು.

‘ಕೃಷಿ ವಲಯಗಳಲ್ಲಿ ಬದಲಾವಣೆ ತರಲು ಸರ್ಕಾರ ಜಲಾನಯನ ಅಭಿವೃದ್ದಿಯ ಕಡೆ ಗಮನ ಕೇಂದ್ರೀಕರಿಸಿದೆ. 2020- 21ನೇ ಸಾಲಿನಲ್ಲಿ ಸರ್ಕಾರವು ಜಲಾನಯನ ಅಭಿವೃದ್ದಿಗಾಗಿ ₹ 170 ಕೋಟಿ ಆಯವ್ಯಯವನ್ನು ಕಲ್ಪಿಸಿದೆ. ಇದರಿಂದಾಗಿ ಭೂ ರಹಿತ ಕಾರ್ಮಿಕರಿಗೆ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉದ್ಯೋಗಾವಕಾಶ ಸಿಕ್ಕಂತಾಗಿದೆ’ ಎಂದು ತಿಳಿಸಿದರು.

‘ಕೋವಿಡ್‌ ಬಿಕ್ಕಟ್ಟಿನ ವೇಳೆಯಲ್ಲಿ ವಲಸೆ ಕಾರ್ಮಿಕರ ಬೆನ್ನೆಲುಬಾಗಿ ಸರ್ಕಾರ ನಿಂತಿದೆ. 16 ಲಕ್ಷಕ್ಕಿಂತಲೂ ಹೆಚ್ಚು ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಣಕಾಸು ನೆರವು ರೂಪದಲ್ಲಿ ₹ 824.21 ಕೋಟಿ ನೀಡಿದೆ. 90 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಿದೆ’ ಎಂದು ತಮ್ಮ ಭಾಷಣದಲ್ಲಿ ತಿಳಿಸಿದ ಅವರು, ‘ಈ ಬಾರಿ ಮಹಿಳಾ‌ ಕೇಂದ್ರಿತ ಬಜೆಟ್‌ಗೆ ಆದ್ಯತೆ ನೀಡಲಾಗುವುದು. ಅಂಗನವಾಡಿಗಳು, ಸಂತಾನೋತ್ಪತ್ತಿ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರಿಗೆ ಸೇವೆ ನೀಡಲು ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

‘ಪೊಲೀಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇ 25ಕ್ಕೆ ಹೆಚ್ಚಿಸಿದ್ದೇವೆ. ಸಬ್ ಇನ್‌ಸ್ಪೆಕ್ಟರ್ ನೇಮಕಾತಿಗೆ ವಯೋಮಿತಿ ಎರಡು ವರ್ಷ ಹೆಚ್ಚಿಸಲಾಗಿದೆ. ಪೊಲೀಸ್ ಗೃಹ –2025 ಯೋಜನೆಗೆ ಚಾಲನೆ ನೀಡಲಾಗಿದೆ. ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ 1,568 ಹುದ್ದೆ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದೂ ಅವರು ಹೇಳಿದರು.

ಸುಮಾರು 40 ನಿಮಿಷಗಳಲ್ಲಿ ಮುಕ್ತಾಯವಾದ ಕಾರ್ಯಕ್ರಮದಲ್ಲಿ 12 ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT