ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮುಗಿದ ‘ರೆಮ್‌ಡಿಸಿವರ್‌’ ಬಳಸಲು ಆದೇಶ: ಶಾಸಕ ಕೆ.ಸುರೇಶ್‌ಗೌಡ ಆರೋಪ

Last Updated 24 ಏಪ್ರಿಲ್ 2021, 12:18 IST
ಅಕ್ಷರ ಗಾತ್ರ

ನಾಗಮಂಗಲ (ಮಂಡ್ಯ): ‘ಜನವರಿಯಲ್ಲೇ ಅವಧಿ ಮುಗಿದಿರುವ ರೆಮ್‌ಡಿಸಿವರ್‌ ಇಂಜೆಕ್ಷನ್‌ ಬಳಕೆ ಮಾಡಲು ಸರ್ಕಾರ ಆದೇಶ ನೀಡಿದೆ. ಆಸ್ಪತ್ರೆಗಳಲ್ಲಿ ಅವಧಿ ಮುಗಿದ ಲಸಿಕೆ ನೀಡುತ್ತಿರುವುದರಿಂದಲೇ ಸಾವಿನ ಸಂಖ್ಯೆ ಅಧಿಕವಾಗಿದೆ’ ಎಂದು ಶಾಸಕ ಕೆ.ಸುರೇಶ್‌ಗೌಡ ಶನಿವಾರ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾಗಮಂಗಲದಲ್ಲೂ ಕೋವಿಡ್‌ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ. ಕೆಲ ರೋಗಿಗಳು ನನಗೆ ಕರೆ ಮಾಡಿ ಅವಧಿ ಮುಗಿದಿರುವ ರೆಮ್‌ಡೆಸಿವರ್‌ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಅವಧಿ ಲಸಿಕೆಯ ಚಿತ್ರಗಳನ್ನೂ ಕಳುಹಿಸಿದ್ದಾರೆ’ ಎಂದರು.

‘ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕೇಳಿದಾಗ 12 ತಿಂಗಳವರೆಗೆ ಹಳೆಯ ಚುಚ್ಚುಮದ್ದುಗಳನ್ನೇ ಬಳಕೆ ಮಾಡಲು ಸರ್ಕಾರ ಆದೇಶ ಮಾಡಿದೆ ಎಂದರು. ಇದೆಂತಹ ಆದೇಶ, ಸರ್ಕಾರ ಆದೇಶ ಮಾಡಿದ ಕೂಡಲೇ ಅವಧಿ ಮುಗಿದ ಚುಚ್ಚುಮದ್ದು ಪುನರ್ಜನ್ಮ ಪಡೆಯುವುದೇ’ ಎಂದು ಪ್ರಶ್ನಿಸಿದರು.

‘ರೆಮ್‌ಡೆಸಿವರ್‌ ಲಸಿಕೆಯ ಸಂಗ್ರಹ ಸಾಕಷ್ಟಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಅವಧಿ ಮುಗಿದಿರುವ ಔಷಧಿ ಇಟ್ಟುಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಅವಧಿ ಮುಗಿದ ಔಷಧಿ ಬಳಸಬಾರದು ಎಂಬು ಕಾನೂನಿದೆ. ಸರ್ಕಾರವೇ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಆರೋಪಿಸಿದರು.

‘ಯಾವುದೇ ಔಷಧಿ ಅವಧಿ ಮೀರಿದರೆ ಅದು ವಿಷವಾಗುತ್ತದೆ. ಸರ್ಕಾರ ವಿಷ ನೀಡಿ ಕೋವಿಡ್‌ ರೋಗಿಗಳನ್ನು ಕೊಲ್ಲುತ್ತಿದೆ. ಸರ್ಕಾರ ನೀಡಿರುವ ಆದೇಶವನ್ನು ತಕ್ಷಣವೇ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಅವಧಿ ಮುಗಿದ ನಂತರ 12 ತಿಂಗಳವರೆಗೂ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ರೆಮ್‌ಡೆಸಿವರ್‌ ಲಸಿಕೆ ಸಂಗ್ರಹಿಸಿ ರೋಗಿಗಳಿಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಮೊದಲು 6 ತಿಂಗಳವರೆಗೆ ಬಳಸಲು ಅವಕಾಶವಿತ್ತು, ಈಗ 12 ತಿಂಗಳಿಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಮಾ.18ರಂದು ಸುತ್ತೋಲೆ ಹೊರಡಿಸಿದೆ. ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಹಾಕಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT