ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

39 ಮಠಗಳಿಗೆ ತಲಾ ₹ 1 ಕೋಟಿ

ಆರ್ಥಿಕ ಸಂಕಷ್ಟ: ತಾರತಮ್ಯ ಮಾಡದೆ ಅನುದಾನ ಹಂಚಿಕೆಗೆ ನಿರ್ಧಾರ
Last Updated 1 ಸೆಪ್ಟೆಂಬರ್ 2020, 21:16 IST
ಅಕ್ಷರ ಗಾತ್ರ

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಆಯ್ದ 39 ಮಠಗಳಿಗೆ ನೀಡಿದ್ದ ₹ 60 ಕೋಟಿಯನ್ನು ದೇವಸ್ಥಾನಗಳಿಗೆ ಮರು ಹಂಚಿಕೆ ಮಾಡಿದ್ದ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಇದೀಗ ಅದೇ ಮಠಗಳಿಗೆ ತಲಾ ₹ 1 ಕೋಟಿಯಂತೆ ₹ 39 ಕೋಟಿ ನೀಡಲು ನಿರ್ಧರಿಸಿದೆ.

‘ಕೋವಿಡ್‌ ಕಾರಣದಿಂದ ಮಠಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ, ಹಿಂದಿನ ಸರ್ಕಾರ ಅನುದಾನ ಘೋಷಿಸಿದ್ದ ಎಲ್ಲ ಮಠಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ’ ಎಂದು ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದಾಗಿ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಅನುಮತಿ ಅಗತ್ಯ. ಅದಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದೂ ಅವರು ಹೇಳಿದರು.

ಪ್ರಸಕ್ತ ಸಾಲಿನ (2020–21) ಬಜೆಟ್‌ನಲ್ಲಿ ಮಠಗಳಿಗೆ ಅನುದಾನ ನೀಡಲು ₹ 30 ಕೋಟಿ ಮೀಸಲಿಡಲಾಗಿದೆ. ಆದರೆ, ಯಾವ ಯಾವ ಮಠಗಳಿಗೆ ಎಷ್ಟೆಷ್ಟು ಅನುದಾನ ನೀಡಬೇಕೆಂಬ ಬಗ್ಗೆ ಹೇಳಿರಲಿಲ್ಲ. ಆದರೆ, ಈ ಮೊತ್ತದಲ್ಲಿ ₹ 1 ಕೋಟಿಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುಗಣಿ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಈಗಾಗಲೇ ನೀಡಲಾಗಿದೆ.

ಸಾಮಾನ್ಯ ಯೋಜನೆಯಡಿ ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ನಿರ್ಮಾಣಗಳಿಗೆ ಪ್ರಸಕ್ತ ಸಾಲಿನಲ್ಲಿ ₹ 26 ಕೋಟಿ ನೀಡಲಾಗಿದೆ. ಈ ಅನುದಾನದಿಂದ ₹ 10 ಕೋಟಿಯನ್ನು ಬಳಸಿ, ಒಟ್ಟು ₹ 39 ಕೋಟಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

39 ಮಠಗಳಿಗೆ ತಲಾ ₹ 1 ಕೋಟಿಯಂತೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿದ್ದೇನೆ. ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಬಹುದು ಎಂದು ಮುಜರಾಯಿ ಸಚಿವಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

₹ 60 ಕೋಟಿ ಘೋಷಿಸಿದ್ದ ಕುಮಾರಸ್ವಾಮಿ

ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್‌ನಲ್ಲಿ ತುಮಕೂರಿನ ಸಿದ್ಧಗಂಗಾಮಠ ಮತ್ತು ಬೆಂಗಳೂರಿನ ಸೊನ್ನೇನ
ಹಳ್ಳಿಯ ಸ್ಫಟಿಕಪುರಿ ಶಾಖಾ ಮಠಕ್ಕೆ ತಲಾ ₹ 5 ಕೋಟಿ, ಶಿವಮೊಗ್ಗದ ಶ್ರೀ ರೇಣುಕಾನಂದ ಸ್ವಾಮೀಜಿ ನಾರಾಯಣಗುರು ಮಹಾಸಂಸ್ಥಾನ ಮಠ, ಧಾರವಾಡದ ಮುರುಘಾಮಠ, ಬಾರ್ಕೂರು ಮಠ, ದಾವಣಗೆರೆ ಹೇಮ–ವೇಮ ಸದ್ಭೋವನ ವಿದ್ಯಾಪೀಠ (ವೇಮನ ಸಂಸ್ಥಾನ) ಮತ್ತು ವಿಶ್ವ ಒಕ್ಕಲಿಗರ ಮಠಕ್ಕೆ ತಲಾ 3 ಕೋಟಿ, ಬೆಂಗಳೂರಿನ ಪುಷ್ಪಗಿರಿ ಮಠ, ದಾವಣಗೆರೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠ ಮತ್ತು ಬಳ್ಳಾರಿ ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ತಲಾ ₹ 2 ಕೋಟಿ ಹಾಗೂ ಇತರ 29 ಮಠಗಳಿಗೆ ತಲಾ 1 ಕೋಟಿಯಂತೆ ಒಟ್ಟು ₹ 60 ಕೋಟಿ ಅನುದಾನ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT