ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆಯುಂಟು, ಬೆಳೆಯೇ ಇಲ್ಲ: ಮಳೆಹಾನಿಯಿಂದ ಕಂಗಾಲಾದ ರೈತರು

ಮಳೆಹಾನಿಯಿಂದ ಕಂಗಾಲಾದ ಹಣ್ಣು, ತರಕಾರಿ ಬೆಳೆಗಾರರು
Last Updated 2 ನವೆಂಬರ್ 2020, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್‍ಡೌನ್‍ನಿಂದ ಬೆಳೆ ಇದ್ದರೂ ಬೆಲೆ ಸಿಗದೆ, ನಷ್ಟ ಅನುಭವಿಸಿದೆವು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಗಳು ಹಾನಿಗೊಳಗಾಗಿದ್ದು, ಈಗ ಬೆಲೆ ಇದ್ದರೂ ಬೆಳೆ ಇಲ್ಲ’ ಎಂಬುದು ಹಣ್ಣು, ತರಕಾರಿ ಬೆಳೆಗಾರರು ಅಳಲು.

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಾತ್ರವಲ್ಲದೆ, ಈ ಬಾರಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಹೆಚ್ಚಾಗಿದೆ. ಎರಡು ತಿಂಗಳಿನಿಂದ ಸುರಿದ ಮಳೆಗೆ ಹಣ್ಣು-ತರಕಾರಿ ಬೆಳೆಗಳು ತೋಟದಲ್ಲೇ ಕೊಳೆತಿರುವ ಉದಾಹರಣೆಗಳು ಸಾಕಷ್ಟು ಇವೆ. ಬೆಳೆಗಳಿಗೆ ಭಾರಿ ಹಾನಿಯಾಗಿರುವುದರಿಂದ
ವರಮಹಾಲಕ್ಷ್ಮಿ ಹಬ್ಬದಿಂದ ದಸರಾವರೆಗೆ ತರಕಾರಿ, ಹಣ್ಣಿನ ದರಗಳು ಏರುತ್ತಲೇ ಇವೆ. ಆದರೆ, ತೋಟಗಳಲ್ಲಿ ಬೆಳೆಯೇ ಇಲ್ಲದೆ ರೈತರು ಅಸಹಾಯಕ ಸ್ಥಿತಿ ತಲುಪಿದ್ದಾರೆ.

‘ಎಂಟು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದೇನೆ. ದಸರಾ ಹಬ್ಬಕ್ಕೆ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದೆ. ಆದರೆ, ಒಂದು ತಿಂಗಳಿನಿಂದ ಸುರಿದ ಮಳೆಗೆ ಹಣ್ಣಿನ ಹಂತದಲ್ಲಿದ್ದ ದ್ರಾಕ್ಷಿಗೆ ಭಾರಿ ಹಾನಿಯಾಯಿತು. ಅರ್ಧದಷ್ಟು ಹಣ್ಣು ಗಿಡದಲ್ಲೇ ಕೊಳೆತಿದೆ. ಇದನ್ನು ಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹100ರವರೆಗೆ
ದರ ಇದೆ. ಆದರೆ, ದ್ರಾಕ್ಷಿ ಮಾರುಕಟ್ಟೆಗೆ ಹೋಗುವ ಸ್ಥಿತಿಯಲ್ಲಿಲ್ಲ’ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದ್ರಾಕ್ಷಿ ಬೆಳೆದಿ
ರುವ ರೈತ ದಿವಾಕರ್ ಹೇಳಿಕೊಂಡರು.

‘ತೋಟದ ತುಂಬಾ ಉತ್ತಮವಾಗಿ ಬೆಳೆದಿದ್ದ ದ್ರಾಕ್ಷಿಗೆ ಲಾಕ್‍ಡೌನ್‍ನಿಂದ ಮಾರುಕಟ್ಟೆಯೇ ಸಿಗಲಿಲ್ಲ. ಕಟಾವು ಮಾಡಲು ಕೆಲಸಗಾರರೂ ಬರಲಿಲ್ಲ. ಸಾರಿಗೆ ವ್ಯವಸ್ಥೆ ಸ್ತಬ್ಧಗೊಂಡಿತ್ತು. ₹15 ಲಕ್ಷ ನಷ್ಟ ಅನುಭವಿಸಿದೆ. ಈಗ ಮಳೆಯಿಂದ ದ್ರಾಕ್ಷಿ ಹಾನಿಗೊಂಡು, ಗಾಯದ ಮೇಲೆ ಮತ್ತೆ ಬರೆ ಎಳೆದಿದೆ’ ಎಂದು ಅಳಲು ತೋಡಿಕೊಂಡರು.

‘ಮಾರುಕಟ್ಟೆಯಲ್ಲಿ ಕ್ಯಾರೆಟ್‍ಗೆ ಈಗ ಕೆ.ಜಿ.ಗೆ ₹80ರಿಂದ ₹120ರವರೆಗೆ ದರ ಇದೆ. ಪ್ರತಿ ವರ್ಷದಂತೆ ಸಾಮಾನ್ಯ ಮಳೆ ಇರುತ್ತದೆ ಎಂದು ಐದು ಎಕರೆ ಪ್ರದೇಶದಲ್ಲಿ ನಾಟಿ ಕ್ಯಾರೆಟ್ ಬೆಳೆದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಕೊಯ್ಲಿನ ಶೇ 70ರಷ್ಟು ಕ್ಯಾರೆಟ್ ಕೊಳೆತಿದೆ. ಈ ಹಿಂದೆ ಕ್ಯಾರೆಟ್ ಇಷ್ಟು ದುಬಾರಿಯಾಗಿರಲಿಲ್ಲ’ ಎಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯ ತರಕಾರಿ ಬೆಳೆ
ಗಾರ ವೆಂಕಟಪ್ಪ ಕಣ್ಣೀರು ಹಾಕಿದರು.

‘ರೈತರ ಪಾಲಿಗೆ ಈ ವರ್ಷವೇ ದುರಂತ. ಬೆಳೆ ಬಂದಾಗ ಅವುಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಈಗ ಬೆಲೆಗಳು ಗಗನಕ್ಕೇರಿದರೂ, ಲಾಭ ಪಡೆಯಲು ತೋಟದಲ್ಲಿ ಬೆಳೆ ಇಲ್ಲ. ರೈತರು ಸತತವಾಗಿ ನಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

***

ಕಡಿಮೆ ಜಮೀನಿನ ರೈತರಿಗೆ ಸಂಕಷ್ಟ ತಪ್ಪದು. ಲಾಕ್‍ಡೌನ್ ಹಾಗೂ ಮಳೆಯಿಂದ ರೈತನಿಗೆ ಬೆಳೆ ಹಾಗೂ ಬೆಲೆ ಇದ್ದೂ ಇಲ್ಲದಂತಾಗಿದೆ.

- ಸಂತೋಷ್, -ರೈತ

***

ಬೆಂಗಳೂರು ಹಾಗೂ ಸುತ್ತಮುತ್ತಲ ರೈತರಿಗೂ ಸರ್ಕಾರ ಮಳೆಹಾನಿ ಪರಿಹಾರ ನೀಡಬೇಕು. ಕಂಗೆಟ್ಟಿರುವ ರೈತರಿಗೆ ಧೈರ್ಯ ನೀಡುವ ಕೆಲಸ ಮಾಡಲಿ.

- ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT