ಸೋಮವಾರ, ಮಾರ್ಚ್ 1, 2021
19 °C
ಕಾಲೇಜು ಶಿಕ್ಷಣ ಇಲಾಖೆಯ ಆದೇಶದಿಂದ ಬೀದಿಗೆ ಬಿದ್ದ ‘ಉಪನ್ಯಾಸಕರು’

‘ಅತಿಥಿ’ಗಳ ಕೈಯಲ್ಲೀಗ ಹಾರೆ, ತರಕಾರಿ!

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೆಸರು– ಈಶ್ವರ್ ರಾವ್ (40 ವರ್ಷ). ಊರು: ಶಿಕಾರಿಪುರ. ಅರ್ಹತೆ: ಎಂ.ಎ. ಬಿ.ಇಡಿ., ಎಂ.ಫಿಲ್‌, ಪಿಎಚ್‌.ಡಿ. ಭದ್ರಾವತಿ, ಸಾಗರ, ಶಿಕಾರಿಪುರ, ಶಿರಾಳಕೊಪ್ಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಒಟ್ಟು 13 ವರ್ಷ ಅತಿಥಿ ಉಪನ್ಯಾಸಕ. ಸದ್ಯ, ಸಂತೆಯಲ್ಲಿ ತರಕಾರಿ ಮಾರಾಟ.

ಹೆಸರು– ಶಂಕ್ರಾನಾಯ್ಕ ಆರ್. (40 ವರ್ಷ) ಊರು: ಚನ್ನಗಿರಿ ತಾಲ್ಲೂಕಿನ ನೆಲ್ಲಿಹಂಕಲು. ಅರ್ಹತೆ: ಎಂ.ಎ (5ನೇ ರ‍್ಯಾಂಕ್‌), ಬಿ.ಇಡಿ, ನೆಟ್‌, ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 9 ವರ್ಷದಿಂದ ಅತಿಥಿ ಉಪನ್ಯಾಸಕ. ಸದ್ಯ ಎಲೆಕ್ಟ್ರಿಶಿಯನ್‌.

ಹೆಸರು– ತಿಪ್ಪೇಸ್ವಾಮಿ ಜಿ.ಎ. (45 ವರ್ಷ) ಊರು: ಹೊಳಲ್ಕೆರೆ. ಅರ್ಹತೆ: ಎಂ.ಎ, ಎಂ.ಫಿಲ್‌ (ಇಂಗ್ಲಿಷ್). ಸರ್ಕಾರಿ ಕಲಾ ಕಾಲೇಜಿನಲ್ಲಿ 12 ವರ್ಷದಿಂದ ಅತಿಥಿ ಉಪನ್ಯಾಸಕ. ಒಂದು ಎಕರೆ ಜಮೀನಿನಲ್ಲಿ ಜೀವನ ನಿರ್ವಹಣೆಗೆ ಕೃಷಿ ಕೆಲಸ.

– ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಒಟ್ಟು 14,183 ಅತಿಥಿ ಉಪನ್ಯಾಸಕರ ಪೈಕಿ, 2020–21ರ ಸಾಲಿಗೆ ಶೇ 50ರಷ್ಟು (7,091) ಮಾತ್ರ ಸಾಕೆಂಬ ಕಾಲೇಜು ಶಿಕ್ಷಣ ಇಲಾಖೆಯ ಆದೇಶದ ಪರಿಣಾಮ, ಬೀದಿಗೆ ಬಿದ್ದಿರುವ ಶೇ 50ರಷ್ಟು ‌‌‌ಮಂದಿಯಲ್ಲಿ ಬಹುತೇಕರ ಸ್ಥಿತಿಯಿದು!

ಕೋವಿಡ್‌ ಕಾರಣದಿಂದ ಕಾಲೇಜುಗಳು ಆರಂಭವಾಗದೆ ಅತಿಥಿ ಉಪನ್ಯಾಸಕರು ವೇತನ ಇಲ್ಲದೆ, ನರೇಗಾ ಸೇರಿದಂತೆ ಇತರ ಕಸುಬಿನ ಕಡೆಗೆ ಮುಖ ಮಾಡಿದ್ದರು. 10–15 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತ ಬಂದಿರುವ ಈ ಉಪನ್ಯಾಸಕರು, ಕಾಲೇಜುಗಳು ಪುನರಾರಂಭಗೊಂಡಾಗ ಮತ್ತೆ ಬೋಧಕರಾಗುವ ನಿರೀಕ್ಷೆಯಲ್ಲಿದ್ದರು. ಆದರೆ, ಕಾಲೇಜು ಶಿಕ್ಷಣ ಇಲಾಖೆಯ ಜ. 19ರ ಆದೇಶ ಹಲವು ಅತಿಥಿ ಉಪನ್ಯಾಸಕರಿಗೆ ಆಘಾತ ನೀಡಿದೆ.

‘15–20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಲೇ ಬಂದ ನಮ್ಮಿಂದ ಸರ್ಕಾರಕ್ಕೆ ಆರ್ಥಿಕವಾಗಿ ಅನುಕೂಲವಾಗಿದೆ. ಆದರೆ, ಈಗ ನಾವು ಕುಟುಂಬ ಸಮೇತ ಬೀದಿಗೆ ಬಿದ್ದಿದ್ದೇವೆ. ಈ ವರ್ಷ ಕಾಯಿಲೆ, ಒತ್ತಡಕ್ಕೆ ತುತ್ತಾಗಿ 24 ಅತಿಥಿ ಉಪನ್ಯಾಸಕರು ಮೃತಪಟ್ಟಿದ್ದಾರೆ. ನಮಗೆ ಇಎಸ್ಐ, ಪಿಎಫ್‌, ಮಹಿಳಾ ಅತಿಥಿ ಉಪನ್ಯಾಸಕರಿಗೆ ವೇತನಸಹಿತ ರಜೆ ಇಲ್ಲ. ಸೇವಾ ಭದ್ರತೆ ನೀಡಿ ಕಾಯಂ ಮಾಡಿದರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದೆವು’ ಎಂದು ಚನ್ನಗಿರಿಯ ಶಿವಕುಮಾರ್‌ ಯರಗಟ್ಟಿಹಳ್ಳಿ ಹೇಳಿದರು.

‘ನಮ್ಮ ಸಂಕಷ್ಟದ ಬಗ್ಗೆ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಂಘದ ಗೌರವಾಧ್ಯಕ್ಷರೂ ಆಗಿರುವ ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರು ಉನ್ನತ ಶಿಕ್ಷಣ ಸಚಿವರಿಗೆ ಕರೆ ಮಾಡಿ, ಪ್ರಸಕ್ತ ಆದೇಶ ವಾಪಸು ಪಡೆದು 2019–20ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನು ಯಥಾಸ್ಥಿತಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಯಾವುದೇ ಹೊಸ ಆದೇಶ ಬಂದಿಲ್ಲ’ ಎಂದೂ ಹೇಳಿದರು.

ಅದೂ ಎರಡೂವರೆ ತಿಂಗಳು!

ಕಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ಬಳಿಕ ಉಳಿಕೆಯಾಗುವ ಹೆಚ್ಚುವರಿ ಕಾರ್ಯಭಾರವನ್ನು ನಿರ್ವಹಿಸಲು ಜ್ಯೇಷ್ಠತೆ ಆಧಾರದಲ್ಲಿ ಕಿರಿಯರನ್ನು ಮತ್ತು ಕಡಿಮೆ ಅವಧಿಯ ಕರ್ತವ್ಯ ನಿರ್ವಹಿಸಿದವರನ್ನು ಕೈಬಿಟ್ಟು, ಶೇ 50ರಷ್ಟು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶಿಸಿದೆ. ಅದೂ ಎರಡೂವರೆ ತಿಂಗಳ ಅವಧಿಗೆ (ಮಾರ್ಚ್‌ 2021ರವರೆಗೆ) ಮಾತ್ರ!

***

ಕೋವಿಡ್‌ ಕಾಲದಲ್ಲಿ ಕುಟುಂಬ ನಿರ್ವಹಿಸಲು ಸಾಧ್ಯವಾಗದೆ ಅಸಹಾಯಕರಾಗಿದ್ದೇವೆ. ಶೇ 50ರಷ್ಟು ಮಂದಿಯನ್ನು ಮಾತ್ರ ನೇಮಿಸಿಕೊಳ್ಳುವ ತೀರ್ಮಾನ ಅವೈಜ್ಞಾನಿಕ

- ಶಿವಕುಮಾರ್‌ ಯರಗಟ್ಟಿಹಳ್ಳಿ, ಅತಿಥಿ ಉಪನ್ಯಾಸಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು