ಶನಿವಾರ, ಏಪ್ರಿಲ್ 1, 2023
29 °C

ವಿಐಎಸ್‌ಎಲ್‌ ಮುಚ್ಚದಂತೆ ಪ್ರಧಾನಿಗೆ ದೇವೇಗೌಡ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್‌ಎಲ್‌) ಖಾಸಗೀಕರಣವನ್ನು ಕೈಬಿಟ್ಟು, ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸಭೆಯ ಸದಸ್ಯರೂ ಆಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಜನವರಿ 15 ರಂದು ಪ್ರಧಾನಿಗೆ ಪತ್ರ ಬರೆದಿರುವ ಅವರು, ‘ನಷ್ಟದ ಕಾರಣ ನೀಡಿ ವಿಐಎಸ್‌ಎಲ್‌ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ದೇಶದ ಅತ್ಯುತ್ತಮ ಸಾರ್ವಜನಿಕ ಉದ್ದಿಮೆಗಳಲ್ಲಿ ಒಂದಾಗಿತ್ತು. ಕೆಲವು ಕೋಟಿ ರೂಪಾಯಿ ಬಂಡವಾಳ ಒದಗಿಸಿದರೆ ಸಂಸ್ಥೆಯನ್ನು ಮತ್ತೆ ಲಾಭದ ಹಳಿಗೆ ತರಬಹುದು. ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಪುನಶ್ಚೇತನಕ್ಕೆ ಯೋಜನೆ ರೂಪಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘1918ರಲ್ಲಿ ಆರಂಭವಾದ ವಿಐಎಸ್‌ಎಲ್‌ ಅನ್ನು ನಾನು ಪ್ರಧಾನಿಯಾಗಿದ್ದ ಅವಧಿಯಲ್ಲಿ 1996ರಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ವ್ಯಾಪ್ತಿಗೆ ತರಲಾಗಿತ್ತು. ಪ್ರಾಧಿಕಾರವು ₹ 650 ಕೋಟಿ ವೆಚ್ಚದಲ್ಲಿ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಿದ್ಧಪಡಿಸಿತ್ತು. ಆದರೆ, ಅದು ಸಾಕಾರಗೊಳ್ಳಲಿಲ್ಲ. 2016ರಲ್ಲಿ ನೀತಿ ಆಯೋಗವು ಹೂಡಿಕೆ ಹಿಂತೆಗೆತಕ್ಕೆ ಶಿಫಾರಸು ಮಾಡಿತ್ತು. ಆದರೆ, ಅದು ಕೂಡ ಸಫಲವಾಗಲಿಲ್ಲ. ಇದರಿಂದಾಗಿ ಕಾರ್ಖಾನೆಯು ಸಂಕಷ್ಟಕ್ಕೆ ಸಿಲುಕಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಐಎಸ್‌ಎಲ್‌ ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುವ ಸಾಮರ್ಥ್ಯ ಹೊಂದಿದೆ. ಈ ಹಿಂದೆ ಇದೇ ಕಾರ್ಖಾನೆಯು ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೊಮೊಬೈಲ್‌ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸುತ್ತಿತ್ತು. ಈಗ 20,000 ಕುಟುಂಬಗಳು ಕಾರ್ಖಾನೆಯನ್ನು ಅವಲಂಬಿಸಿವೆ. ಮುಚ್ಚುವ ನಿರ್ಧಾರ ಕೈಗೊಂಡಿರುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಐಎಸ್‌ಎಲ್‌ ಅನ್ನು ಪುನಶ್ಚೇತನಗೊಳಿಸಿದರೆ ರಕ್ಷಣಾ ಇಲಾಖೆ, ಅಣುಶಕ್ತಿ ಉತ್ಪಾದನಾ ಘಟಕಗಳು, ಆಟೊಮೊಬೈಲ್‌ ಕ್ಷೇತ್ರ ಹಾಗೂ ರೈಲ್ವೆ ಇಲಾಖೆಗಳಿಗೆ ಪೂರಕವಾಗಿ ಬಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು