ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ: ತಿಪ್ಪೆ ಸಾರಿಸಲು ತನಿಖೆ –ಎಚ್‌.ಡಿ.ಕುಮಾರಸ್ವಾಮಿ

Last Updated 11 ಮಾರ್ಚ್ 2021, 9:25 IST
ಅಕ್ಷರ ಗಾತ್ರ

ಮೈಸೂರು: ‘ಸಿ.ಡಿ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸಿದರೂ ಪ್ರಯೋಜನವಿಲ್ಲ. ತನಿಖೆಗಳೆಲ್ಲವೂ ತಿಪ್ಪೆ ಸಾರಿಸುವ ಕೆಲಸ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಟೀಕಿಸಿದರು.

ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ‘ಯಾರ ವಿರುದ್ಧ, ಏನಂತ ತನಿಖೆ ಮಾಡುತ್ತಾರೆ? ಯಾವ ಅಂಶಗಳ ಅಧಾರದಲ್ಲಿ ತನಿಖೆಗೆ ಆದೇಶಿಸಿದ್ದಾರೋ ಗೊತ್ತಿಲ್ಲ’ ಎಂದರು.

‘ಎಫ್‌ಎಸ್‌ಎಲ್‌ ವರದಿಯಲ್ಲಿ ಸಿ.ಡಿ ನಕಲಿ ಎಂದು ಹೇಳಬಹುದು. ಅದನ್ನು ಬಿಟ್ಟು ಈ ತನಿಖೆಯಿಂದ ಏನೂ ಆಗದು. ಈ ಹಿಂದೆ ಮೇಟಿ ಪ್ರಕರಣ ಒಳಗೊಂಡಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ಇದೇ ರೀತಿ ತನಿಖೆ ನಡೆಸಿ ಕ್ಲೀನ್‌ಚಿಟ್‌ ಕೊಡಲಾಗಿದೆ. ತಪ್ಪಿತಸ್ಥ ಎನಿಸಿಕೊಂಡು ಯಾರೂ ಜೈಲಿಗೆ ಹೋದ ಉದಾಹರಣೆಯಿಲ್ಲ’ ಎಂದು ದೂರಿದರು.

ಜನರಿಗೆ ರಕ್ಷಣೆ ನೀಡಲು ಸಾಧ್ಯವೇ?: ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರುವುದರ ಬಗ್ಗೆ ಪ್ರತಿಕ್ರಿಯಿಸಿ, ‘ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾಗದೆ ಕೋರ್ಟ್‌ ಮೊರೆ ಹೋಗುವುದಾದರೆ, ಈ ರಾಜ್ಯದ ಆರೂವರೆ ಕೋಟಿ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

ಈ ಆರು ಮಹಾನುಭಾವರು ‘ನಮ್ಮ ವಿರುದ್ಧ ಯಾವುದೇ ಅಪಪ್ರಚಾರದ ವಿಷಯಗಳು ಮಾಧ್ಯಮಗಳಲ್ಲಿ ಬರಬಾರದು’ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ ಪರವಾಗಿರಲಿಲ್ಲ. ಆದರೆ ‘ನಮಗೆ ಸಂಬಂಧಿಸಿದ ಸಿ.ಡಿ ಬಿಡುಗಡೆ ಮಾಡಬಾರದು’ ಎಂದು ಇವರು ಕೋರಿರುವುದು ವಕೀಲರ ಮೂಲಕ ನನ್ನ ಗಮನಕ್ಕೆ ಬಂದಾಗ ಆಶ್ಚರ್ಯವಾಯ್ತು ಎಂದರು.

ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವ ಕುರಿತ ಪ್ರಶ್ನೆಗೆ, ‘ಅವರು ಸರ್ವಸ್ವತಂತ್ರರು ಇದ್ದಾರೆ. ನಾನು ಆ ಬಗ್ಗೆ ಏನೂ ಚರ್ಚೆ ಮಾಡುವುದಿಲ್ಲ. ನಮಗಿಂತ ಹೆಚ್ಚು ಆತ್ಮೀಯತೆ ಕಾಂಗ್ರೆಸ್‌ ಪರ ಬಂದಿರಬಹುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT