ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಲ್ಲಿ ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನೆ: ದ್ರೌಪದಿ ಮುರ್ಮು ಉದ್ಘಾಟನೆ

*ಸೌಲಭ್ಯ ಉದ್ಘಾಟಿಸಿದ ರಾಷ್ಟ್ರಪತಿ *ಸಂಕೀರ್ಣ ತಂತ್ರಜ್ಞಾನ ಹೊಂದಿದ ಆರನೇ ದೇಶ ಭಾರತ
Last Updated 27 ಸೆಪ್ಟೆಂಬರ್ 2022, 16:12 IST
ಅಕ್ಷರ ಗಾತ್ರ

ಬೆಂಗಳೂರು: ಉಪಗ್ರಹಗಳ ಉಡಾವಣೆ, ಬಾಹ್ಯಾಕಾಶ ಯಾನ, ಅಂತರ್‌ಗ್ರಹ ಯಾನಗಳಿಗೆ ಬೇಕಾಗುವ ಅಧಿಕ ತೂಕದ ರಾಕೆಟ್‌ಗಳಿಗೆ ಅಗತ್ಯವಿರುವಕ್ರಯೋಜೆನಿಕ್‌ ಎಂಜಿನ್‌ಗಳನ್ನು ಉತ್ಪಾದಿಸುವಸಮಗ್ರ ಕ್ರಯೋಜೆನಿಕ್‌ ಎಂಜಿನ್‌ ಉತ್ಪಾದನಾ ಸೌಲಭ್ಯವನ್ನು (ಐಸಿಎಂಎಫ್‌) ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಸ್ಥಾಪಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಈ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಾಗಿ (ಇಸ್ರೊ) ಒಂದೇ ಸೂರಿನಡಿ ಕ್ರಯೋಜೆನಿಕ್‌ ಎಂಜಿನ್‌ಗಳ ಉತ್ಪಾದನಾ ವ್ಯವಸ್ಥೆಯನ್ನು ಎಚ್‌ಎಎಲ್‌ ಸ್ಥಾಪಿಸಿದೆ. ಸುಮಾರು 4,500 ಚದರಡಿ ಪ್ರದೇಶದಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕವಿದೆ. ಭಾರತೀಯ ರಾಕೆಟ್‌ಗಳಿಗಾಗಿ ಕ್ರಯೋಜೆನಿಕ್‌ (ಸಿಇ 20) ಮತ್ತು ಸೆಮಿ ಕ್ರಯೋಜೆನಿಕ್‌ (ಎಸ್‌ಇ2000) ಎಂಜಿನ್‌ಗಳನ್ನು ಉತ್ಪಾದಿಸುವ 70 ಹೈ–ಟೆಕ್‌ ಉಪಕರಣಗಳು ಮತ್ತು ಪರೀಕ್ಷಾ ಸೌಲಭ್ಯಗಳು ಇಲ್ಲಿವೆ.

ಕ್ರಯೋಜೆನಿಕ್‌ ಎಂದರೇನು?:

ಕ್ರಯೋಜೆನಿಕ್‌ ಎಂಜಿನ್‌ನಲ್ಲಿ ಕ್ರಯೋಜೆನಿಕ್‌ ಇಂಧನ ಮತ್ತು ಆಕ್ಸಿಡೈಸರ್‌ಗಳನ್ನು ಬಳಸಲಾಗುತ್ತದೆ. ಈ ಇಂಧನ ಮತ್ತು ಆಕ್ಸಿಡೈಸರ್‌ ಅನಿಲ ರೂಪದಲ್ಲಿರುತ್ತವೆ. ಅವುಗಳನ್ನು ದ್ರವರೂಪಕ್ಕೆ ಪರಿವರ್ತಿಸಿ ಕಡಿಮೆ ತಾಪಮಾನದಲ್ಲಿ ರಾಕೆಟ್‌ನ ಇಂಧನ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಬಾಹ್ಯಾಕಾಶದಲ್ಲಿ ರಾಕೆಟ್‌ನ ವಿವಿಧ ಹಂತಗಳಲ್ಲಿ ಇದನ್ನು ಉರಿಸಿದಾಗ ಭೂಮಿಯಲ್ಲಿ ಬಳಕೆಯಾಗುವ ಇತರ ದ್ರವರೂಪಿ ಇಂಧನಕ್ಕಿಂತಲೂ ಅಧಿಕ ನೂಕುಬಲವನ್ನು ನೀಡುತ್ತದೆ. ಬಾಹಾಕ್ಯಾಶದಲ್ಲಿ ನೌಕೆಗಳಿಗೆ ಕಡಿಮೆ ಸಮಯದಲ್ಲಿ ಮಿತವ್ಯಯದಲ್ಲಿ ಅಧಿಕ ವೇಗೋತ್ಕರ್ಷ ನೀಡುತ್ತದೆ.

ಅತ್ಯಂತ ಸಂಕೀರ್ಣ ಸ್ವರೂಪದ ಕಾರಣ ಕ್ರಯೋಜೆನಿಕ್ ಎಂಜಿನ್ ತಯಾರಿಕೆಯ ತಂತ್ರಜ್ಞಾನ ಅಮೆರಿಕಾ, ಫ್ರಾನ್ಸ್‌, ಜಪಾನ್‌, ಚೀನಾ ಮತ್ತು ರಷ್ಯಾ ಬಳಿ ಮಾತ್ರ ಇದೆ. ಇದೀಗ ಭಾರತ ಆ ಸಾಲಿಗೆ ಸೇರಿದೆ.

ಮಿತ್ರ ರಾಷ್ಟ್ರ ರಷ್ಯಾ ಸೇರಿದಂತೆ ಇತರ ಯಾವುದೇ ದೇಶ ಭಾರತಕ್ಕೆ ಕ್ಲಿಷ್ಟಕರ ಕ್ರಯೋಜೆನಿಕ್ ತಂತ್ರಜ್ಞಾನವನ್ನು ನೀಡಲು ನಿರಾಕರಿಸಿದ್ದವು. ಪೋಖ್ರಾನ್‌ನಲ್ಲಿ ಅಣು ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಭಾರತಕ್ಕೆ ಕ್ರಯೋಜೆನಿಕ್‌ ತಂತ್ರಜ್ಞಾನದ ಹಸ್ತಾಂತರವನ್ನೂ ನಿಷೇಧಿಸಲಾಗಿತ್ತು. ಆದರೆ, ಛಲ ಬಿಡದ ಭಾರತೀಯ ವಿಜ್ಞಾನಿಗಳು ಸ್ವದೇಶಿ ಎಂಜಿನ್‌ ತಯಾರಿಸುವಲ್ಲಿ ಯಶಸ್ವಿಯಾದರು.

2014 ರ ಜನವರಿ 5 ರಂದು ಸ್ವದೇಶಿ ನಿರ್ಮಿತ ಕ್ರಯೋಜೆನಿಕ್‌ ಎಂಜಿನ್‌ ಮೂಲಕ ಜಿಎಸ್‌ಎಲ್‌ವಿ–ಡಿ5 ರಾಕೆಟ್‌ ಉಡಾವಣೆ ಮಾಡುವ ಮೂಲಕ ಕ್ರಯೋಜೆನಿಕ್‌ ತಂತ್ರಜ್ಞಾನ ನಿರ್ಮಾಣದ ಆರನೇ ದೇಶವಾಗಿ ಭಾರತ ಹೊರಹೊಮ್ಮಿತು.

2013 ರಲ್ಲಿ ಒಪ್ಪಂದ:

ಕ್ರಯೋಜೆನಿಕ್‌ ಎಂಜಿನ್‌ ಮಾಡ್ಯೂಲ್‌ಗಳ ತಯಾರಿಕೆ ಸಂಬಂಧ 2013 ರಲ್ಲಿ ಎಚ್‌ಎಎಲ್ ಮತ್ತು ಇಸ್ರೊ ಒಪ್ಪಂದಕ್ಕೆ ಸಹಿ ಮಾಡಿದ್ದವು. ಎಚ್‌ಎಎಲ್‌ ಏರೋಸ್ಪೇಸ್‌ ವಿಭಾಗದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಲಾಗಿದ್ದು, ಸುಮಾರು ₹208 ಕೋಟಿ ಬಂಡವಾಳ ತೊಡಗಿಸಲಾಗಿದೆ. ಎಲ್ಲ ಮಹತ್ವದ ಉಪಕರಣಗಳು ಮತ್ತು ಅವುಗಳ ಜೋಡಣೆ ಕಾರ್ಯ ಈಗಾಗಲೇ ಮುಗಿದಿದೆ. 2023 ರ ಮಾರ್ಚ್‌ನಿಂದ ಎಂಜಿನ್‌ ತಯಾರಿಕೆ ಆರಂಭವಾಗಲಿದೆ.

ಎಚ್ಎಎಲ್‌ ಏರೋಸ್ಪೇಸ್‌ ವಿಭಾಗ ಸದ್ಯಕ್ಕೆ ಪಿಎಸ್‌ಎಲ್‌ವಿಯ ದ್ರವರೂಪಿ ಇಂಧನ ಟ್ಯಾಂಕ್‌ಗಳು ಮತ್ತು ಉಡಾವಣೆ ವಾಹನಗಳ ರಚನೆ, ಜಿಎಸ್‌ಎಲ್‌ವಿ (ಜಿಎಸ್‌ಎಲ್‌ವಿ ಎಂಕೆ–2), ಜಿಎಸ್‌ಎಲ್‌ವಿ ಎಂಕೆ–3 ಮತ್ತು ಜಿಎಸ್‌ಎಲ್‌ವಿ ಎಂಕೆ–2 ನ ಹಂತಗಳ ಸಂಯೋಜನೆಯನ್ನು ಉತ್ಪಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT