ಗುರುವಾರ , ಅಕ್ಟೋಬರ್ 21, 2021
21 °C

ಸಾರಿಗೆ ಇಲಾಖೆ: ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ: ಬಿ. ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಾರಿಗೆ ಇಲಾಖೆಯ ತನಿಖಾ ಠಾಣೆಗಳಲ್ಲಿ ಸಿಬ್ಬಂದಿಯೇ ಇಲ್ಲ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಶುಕ್ರವಾರ ವಿಧಾನ ಪರಿಷತ್‌ಗೆ ತಿಳಿಸಿದರು.

ಕಾಂಗ್ರೆಸ್‌ನ ಕೆ. ಗೋವಿಂದರಾಜ್‌ ಅವರ ಪರವಾಗಿ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇಲಾಖೆಯಲ್ಲಿ 2,781 ಹುದ್ದೆಗಳಿಗೆ ಮಂಜೂರಾತಿ ಇದೆ. 1,252 ಹುದ್ದೆಗಳು ಮಾತ್ರ ಭರ್ತಿ ಇದ್ದು, 1,529 ಹುದ್ದೆಗಳು ಖಾಲಿ ಇವೆ’ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು 15 ಸಾರಿಗೆ ತನಿಖಾ ಠಾಣೆಗಳಿವೆ. ಅವುಗಳಿಗೆ 37 ಹುದ್ದೆಗಳ ಮಂಜೂರಾತಿ ಇದೆ. ಎಂಟು ಮಂದಿ ಮಾತ್ರ ಇದ್ದು, 29 ಹುದ್ದೆಗಳು ಖಾಲಿ ಇವೆ. ತನಿಖಾ ಠಾಣೆಗಳಲ್ಲಿನ ಎಲ್ಲ 21 ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಹುದ್ದೆಗಳೂ ಖಾಲಿ ಇವೆ ಎಂದರು.

ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಇರುವ ಕಾರಣದಿಂದ ನೇಮಕಾತಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ನೇಮಕಾತಿಗೆ ಒಪ್ಪಿಗೆ ನೀಡಲು ಸಿದ್ಧತೆ ನಡೆದಿದೆ. ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.

‘ಲಂಚ ವಸೂಲಿಗೆ ಡ್ರಮ್‌’: ‘ಸಾರಿಗೆ ಇಲಾಖೆಯ ತನಿಖಾ ಠಾಣೆಗಳಲ್ಲಿ ಅಗತ್ಯ ಸಿಬ್ಬಂದಿ ಇಲ್ಲ. ಇರುವ ಅಧಿಕಾರಿ, ಸಿಬ್ಬಂದಿಗಳು ಲಂಚ ವಸೂಲಿಯಲ್ಲಿ ಮುಳುಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಬಳಿ ಸಾರಿಗೆ ಇಲಾಖೆ ತನಿಖಾ ಠಾಣೆಯಲ್ಲಿ ಅಧಿಕಾರಿಯೊಬ್ಬರು ಲಂಚ ವಸೂಲಿಗೆ ಡ್ರಮ್‌ ಇರಿಸಿದ್ದಾರೆ. ವಾಹನ ಚಾಲಕರು ಡ್ರಮ್‌ನಲ್ಲಿ ಹಣ ಹಾಕಿ ಮುಂದಕ್ಕೆ ಹೋಗಬೇಕು’ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು