ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿಗೆ ಕಾದು ಶಾಸಕರಾಗಿ ಪ್ರಮಾಣ ಸ್ವೀಕರಿಸುವುದನ್ನು ತಪ್ಪಿಸಿಕೊಂಡ ಮಾನೆ!

Last Updated 11 ನವೆಂಬರ್ 2021, 19:55 IST
ಅಕ್ಷರ ಗಾತ್ರ

ಬೆಂಗಳೂರು: ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದಿರುವ ಶ್ರೀನಿವಾಸ ಮಾನೆ ಅವರು ತಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗಾಗಿ ಕಾದು, ಶಾಸಕರಾಗಿ ಪ್ರಮಾಣ ಸ್ವೀಕರಿಸುವುದನ್ನು ತಪ್ಪಿಸಿಕೊಂಡು ನಿರಾಸೆಗೆ ಒಳಗಾದರು.

ಗುರುವಾರ ಬೆಳಿಗ್ಗೆ 11 ಕ್ಕೆ ಪ್ರಮಾಣ ಸ್ವೀಕರಿಸಲು ಮಾನೆ ಬಂದು ಕುಳಿತಿದ್ದರು. ಆದರೆ, ಅವರ ಪಕ್ಷದ ಅಧ್ಯಕ್ಷರು ಮಾತ್ರ ಸರಿಯಾದ ಸಮಯಕ್ಕೆ ವಿಧಾನಸೌಧಕ್ಕೆ ಬರಲೇ ಇಲ್ಲ. ಇದರಿಂದ ವಿಚಲಿತರಾದ ಮಾನೆ ಕಾರ್ಯಕ್ರಮ ಆರಂಭ ಆಗುತ್ತಿದ್ದಂತೆ ಹೊರಹೋದರು. ಬಹಳ ಹೊತ್ತು ಬರಲಿಲ್ಲ. ಇದರಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನೂ ಕಾಯುವಂತೆ ಮಾಡಿ, ಅವರ ಬೇಸರಕ್ಕೂ ಕಾರಣರಾದರು. ಸಿಂದಗಿಯಿಂದ ಗೆದ್ದಿರುವ ರಮೇಶ ಭೂಸನೂರು ಅವರಿಗೆ ಕಾಗೇರಿ ಪ್ರಮಾಣ ಬೋಧಿಸಿದರು.

ಆ ಬಳಿಕ ಮಾನೆ ಅವರು ಬರಬಹುದು ಎಂದು ಕಾಗೇರಿ ಕಾದರು. ‘ಎಲ್ಲಾದರೂ ಇದ್ದರೆ ನೋಡಿ ಮಾನೆಯವರನ್ನು ಕರೆ ತನ್ನಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾರಿಡಾರ್‌ ಮತ್ತಿತರ ಕಡೆಗಳಲ್ಲಿ ಅಧಿಕಾರಿಗಳು ಹುಡುಕಿದಾಗ, ಅವರು ಎಲ್ಲೂ ಸಿಗಲಿಲ್ಲ. ನಿಯಮ ಬದ್ಧವಾಗಿ ಮಾನೆ ಅವರ ಹೆಸರನ್ನು ಕೂಗಿದಾಗಲು ಅವರು ಬರದ ಕಾರಣ, ಕಾಗೇರಿ ತಮ್ಮ ಬೇರೆ ನಿಗದಿತ ಕಾರ್ಯಕ್ರಮಕ್ಕೆ ತೆರಳಿದರು.

ಆ ಬಳಿಕ ಅಲ್ಲಿಗೆ ಬಂದ ಶ್ರೀನಿವಾಸ ಮಾನೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಕಾರ್ಯಕ್ರಮದ ಸಮಯ 11.30 ಕ್ಕೆ ನಿಗದಿಯಾಗಿತ್ತು. ಅವಸರ ಮಾಡಿದ ಸಭಾಧ್ಯಕ್ಷರು ತಮಗೆ ಪ್ರಮಾಣ ಬೋಧಿಸಲಿಲ್ಲ’ ಎಂದು ದೂರಿದರು. ಮೂಲಗಳ ಪ್ರಕಾರ, ಮಾನೆ ಅವರು ಡಿ.ಕೆ.ಶಿವಕುಮಾರ್ ಅವರಿಗಾಗಿ ಕಾಯುತ್ತಿದ್ದರು. ಅವರು ಸಕಾಲಕ್ಕೆ ಬರದ ಕಾರಣ ಹೊರಹೋದರು.

ಈ ವಿಷಯವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಟ್ರಾಫಿಕ್‌ನಿಂದಾಗಿ ಬರುವುದು ತಡವಾಯಿತು. ಸಭಾಧ್ಯಕ್ಷರು ಅವಸರ ಮಾಡಬಾರದಾಗಿತ್ತು. ಗೌರವ ಕೊಟ್ಟು ಸಭಾಧ್ಯಕ್ಷರ ಕಚೇರಿಗೆ ಹೋಗಿ ಬೇರೊಂದು ಸಮಯ ಕೇಳುತ್ತೇವೆ’ ಎಂದರು.

ಸಹಕಾರ ಸಪ್ತಾಹ ಮುಂದೂಡಿಕೆ

ಬೆಂಗಳೂರು: ಇದೇ 14ರಿಂದ ನಡೆಯಬೇಕಿದ್ದ ಸಹಕಾರ ಸಪ್ತಾಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

‘ಸ್ಥಳೀಯ ಸಂಸ್ಥೆಗಳಿಂದ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿ. 10ರಂದು ಚುನಾವಣೆ ನಿಗದಿಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ, ಸಹಕಾರ ಸಪ್ತಾಹವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ನ. 14ರಿಂದ ಸಹಕಾರ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಳು ದಿನ ಸಪ್ತಾಹ ಹಮ್ಮಿಕೊಳ್ಳುವ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಕೂಡ ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಸಹಕಾರ ಸಪ್ತಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT