ಮಂಗಳವಾರ, ಮಾರ್ಚ್ 28, 2023
23 °C

ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪಕ್ಷವನ್ನು ಸಂಘಟಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದೇ ಗುರಿ. ಚುನಾವಣೆಗೆ ಒಂದು ವರ್ಷಕ್ಕೂ ಮೊದಲೇ ಅಂದರೆ, ಜ. 15ರೊಳಗೆ ಕನಿಷ್ಠ 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಗುವುದು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮತ್ತು 2023ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಮುಖಂಡರ ಜೊತೆ ಗುರುವಾರ ಅವರು ಚರ್ಚೆ ನಡೆಸಿದರು.

ಸಭೆಗೂ ಮೊದಲು ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ‘ಮುಂದಿನ ಬುಧವಾರದವರೆಗೆ ಪಕ್ಷದ ಜಿಲ್ಲಾಮಟ್ಟದ ನಾಯಕರ ಜೊತೆ ಚರ್ಚಿಸುತ್ತೇನೆ. ಪದಾಧಿಕಾರಿಗಳ ನೇಮಕದ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.

‘ಕೋವಿಡ್ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲಾ ಪ್ರವಾಸ ಕೈಗೊಳ್ಳುತ್ತೇನೆ. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆಯೂ ತಿಳಿಸುತ್ತೇನೆ’ ಎಂದರು.

‘ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಆಡಳಿತ ನಡೆಸುವಾಗ ದೆಹಲಿಯಿಂದ ಇಲ್ಲಿಗೆ ಉಸ್ತುವಾರಿಗಳು ಬರುತ್ತಾರೆ. ರಾಜ್ಯಕ್ಕೆ ಅವರು ಬರುವ ಉದ್ದೇಶವಾದರೂ ಏನು? ಕರ್ನಾಟಕ ಸಂಪದ್ಭರಿತ ರಾಜ್ಯವಾಗಿದ್ದು, ಅವರು ಇಲ್ಲಿನ ಸಂಪತ್ತನ್ನು ಲೂಟಿ ಮಾಡಲು ಬರುತ್ತಾರೆ. ಚುನಾವಣೆ ನಡೆಯುವ ರಾಜ್ಯಗಳಿಗೆ ಸಂಪತ್ತು ಕಳುಹಿಸುವುದಷ್ಟೆ ಅವರ ಕೆಲಸ’ ಎಂದು ಆರೋಪಿಸಿದರು.

ಶಾಸಕ ಬಂಡೆಪ್ಪ ಕಾಶೆಂಪೂರ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಘಟಕಗಳ ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರು, ಹಾಲಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು, 2018 ಮತ್ತು 2019ರ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಸಭೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು