ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಗ್ರಾಮ ಪಂಚಾಯಿತಿಗೆ ಕೋವಿಡ್‌ ನಿರ್ವಹಣೆಗಾಗಿ ₹50 ಸಾವಿರ ಮುಂಗಡ: ಸುಧಾಕರ್

Last Updated 20 ಮೇ 2021, 9:29 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ₹ 50 ಸಾವಿರ ಮುಂಗಡ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಹಳ್ಳಿಗಳಲ್ಲಿ ಸೋಂಕಿತರ ಮನೆಗೆ ಭೇಟಿ ನೀಡಿ, ಅವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸಾಗಿಸಲು ಸ್ಥಳೀಯಮಟ್ಟದ ಕಾರ್ಯಪಡೆಗೆ ಇದರಿಂದ ಅನುಕೂಲ ಆಗಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಡೆಗಳಲ್ಲಿ ತಲಾ 25ರಂತೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಡಲಾಗುತ್ತಿದೆ. ಕೇಂದ್ರದಿಂದ ಇತ್ತೀಚೆಗೆ 800 ಆಮ್ಲಜನಕ ಸಾಂದ್ರಕಗಳು ಬಂದಿದ್ದು, ಅವುಗಳನ್ನು ಮೂಲಸೌಕರ್ಯ ಕಡಿಮೆ ಇರುವ ಮಂಡ್ಯ, ಚಿತ್ರದುರ್ಗ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಿಗೆ ನೀಡಲಾಗುತ್ತಿದೆ’ ಎಂದರು.

‘ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಚಿಕಿತ್ಸೆಗೆ ಐಸಿಯು ವ್ಯವಸ್ಥೆ, ಆಮ್ಲಜನಕ ಪೂರೈಕೆ ಸೇರಿದಂತೆ ಹೆಚ್ಚು ನೆರವು ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತುಮಕೂರು, ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡುತ್ತೇನೆ. ಬಳಿಕ ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ’ ಎಂದರು.

‘ಎಲ್ಲ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೋರಲಾಗುವುದು. ಶೇ 37ರಿಂದ 40ರಷ್ಟಿದ್ದ ಪಾಸಿಟಿವಿಟಿ ದರ ಶೇ 27ಕ್ಕೆ ಬಂದಿದೆ. ಇದನ್ನು ಶೇ 5ಕ್ಕಿಂತ ಕಡಿಮೆ ಇಳಿಸುವ ಗುರಿ ಇದೆ. ಬೇರೆ ದೇಶಗಳ ಕೊರೊನಾ ಅಲೆ ಬಗ್ಗೆ ಕಾನ್ಪುರ ಐಐಟಿ ವರದಿ ನೀಡಿದ್ದು, ಈ ಬಗ್ಗೆ ಕೇಂದ್ರದ ಜೊತೆ ಚರ್ಚೆಯಾಗಿ ಸಲಹೆ ಸಿಕ್ಕಿದೆ. ಸಾವಿನ ಸಂಖ್ಯೆ ಹೆಚ್ಚು ಕಂಡುಬರುತ್ತಿದ್ದು, ಅದನ್ನೂ ಕಡಿಮೆ ಮಾಡಬೇಕಿದೆ’ಎಂದರು.

‘ಅಂಕಿ ಅಂಶ ಮುಚ್ಚಿಟ್ಟರೆ ಯಾವುದೇ ಲಾಭವಿಲ್ಲ. ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಇನ್ನೂ ಹೆಚ್ಚಿಸಲು, 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಸೂಚಿಸಲಾಗಿದೆ. ಕಪ್ಪು ಶಿಲೀಂಧ್ರ ರೋಗ ನೋಡಿಕೊಂಡು ಔಷಧಿ ವಿತರಣೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಔಷಧಿ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋವಿಡ್‌ನಿಂದ ಗುಣಮುಖರಾದವರ ಆರೋಗ್ಯದ ಮೇಲೆಯೂ ನಿಗಾ ಇಡಬೇಕೆಂದು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT