ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ: ಸಚಿವ ಡಾ.ಕೆ.ಸುಧಾಕರ್‌

ಸಚಿವ ಡಾ.ಕೆ.ಸುಧಾಕರ್‌ ಹೇಳಿಕೆ; ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದು ಇತರರಿಗೆ ಮಾದರಿಯಾಗಲಿ
Last Updated 7 ಏಪ್ರಿಲ್ 2021, 12:54 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಕ್ಷೇತ್ರದ ಆಧಾರಸ್ಥಂಭಗಳು. ಹೀಗಾಗಿ ಮೊದಲ ಹಂತದಲ್ಲಿ ರಾಜ್ಯದ ಒಟ್ಟು 250 ಕೇಂದ್ರಗಳನ್ನು ಉನ್ನತೀಕರಿಸಲು ಮುಂದಾಗಿದ್ದೇವೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬುಧವಾರ ಹೇಳಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬ ಹಾಗೂ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ನವೀಕೃತ ಕೇಂದ್ರ ಕಚೇರಿ, ಪರೀಕ್ಷಾ ಸ್ಕ್ಯಾನಿಂಗ್‌ ಕೇಂದ್ರ, ರಕ್ತದಾನ ಮತ್ತು ನೇತ್ರದಾನ ಶಿಬಿರಗಳನ್ನು ಉದ್ಘಾಟಿಸಿದರು. ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಚೀಟಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಗ್ರಾಮೀಣ ಭಾಗದಲ್ಲಿ ಸುಮಾರು 9,600 ಉಪ ಕೇಂದ್ರಗಳಿವೆ. ಇವುಗಳ ಅಭಿವೃದ್ಧಿಯೇ ನಮ್ಮ ಧ್ಯೇಯ. ನೀರು ಹಾಗೂ ವಸತಿಯಂತೆ ಉತ್ತಮ ಆರೋಗ್ಯ ಸೇವೆ ಪಡೆಯುವುದು ಎಲ್ಲರ ಮೂಲಭೂತ ಹಕ್ಕು. ಯಾರು ಕೂಡ ಇದರಿಂದ ವಂಚಿತರಾಗಬಾರದು’ ಎಂದರು.

‘ಕೋವಿಡ್‌ ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಎರಡನೇ ಅಲೆಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಜ್ಞಾನಿಗಳು ಲಸಿಕೆ ಕಂಡುಹಿಡಿದು ಉಪಕಾರ ಮಾಡಿದ್ದಾರೆ. ಇದನ್ನು ಬಳಸಿಕೊಳ್ಳುವ ಬದ್ಧತೆಯನ್ನು ನಾವೆಲ್ಲ ತೋರಬೇಕು. ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಆ ಮೂಲಕ ಜನರಲ್ಲಿರುವ ಭಯ ದೂರ ಮಾಡಬೇಕು’ ಎಂದು ಸೂಚಿಸಿದರು.

‘ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮೈಸೂರು, ಕಲಬುರ್ಗಿ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅನೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಹೊಣೆ ನಾಗರಿಕರ ಮೇಲಿದೆ. ಜನರು ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲಲು ಸಾಧ್ಯ’ ಎಂದು ಹೇಳಿದರು.

‘ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 25 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ರಾಮನಗರದ ಹೊಸ ಕ್ಯಾಂಪಸ್‌ಗೆ ಮುಂದಿನ ಮೂರು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ’ ಎಂದರು.

‘ವರ್ಷದಲ್ಲಿ 40 ಸಾವಿರ ನೇತ್ರ ದಾನ’: ‘ದೇಶದಲ್ಲಿ ವರ್ಷಕ್ಕೆ ಸುಮಾರು 40 ಸಾವಿರ ನೇತ್ರದಾನ ನಡೆಯುತ್ತಿದೆ. ಈ ಪೈಕಿ ಸುಮಾರು 30 ರಿಂದ 35 ಸಾವಿರ ಕಣ್ಣುಗಳು ಮಾತ್ರ ಸಕಾಲಕ್ಕೆ ಲಭ್ಯವಾಗುತ್ತಿವೆ. ಸುಮಾರು ಐದು ಸಾವಿರದಷ್ಟು ಕಣ್ಣುಗಳನ್ನು ಕಸಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಸುಧಾಕರ್‌ ಹೇಳಿದರು.

ನೇತ್ರದಾನಕ್ಕೆ ಹೆಸರು ನೋಂದಾಯಿಸಿಕೊಂಡ ಸುಧಾಕರ್‌ ಅವರಿಗೆ ಮಿಂಟೋ ನಿರ್ದೇಶಕಿ ಡಾ.ಸುಜಾತ ರಾಥೋಡ್ ಪ್ರಮಾಣ ಪತ್ರ ಹಸ್ತಾಂತರಿಸಿದರು.

‘ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ನೇತ್ರದಾನವಾಗಬೇಕು. ವ್ಯಕ್ತಿ ಮರಣ ಹೊಂದಿದ ಕೂಡಲೇ ಸಂಬಂಧಿಕರು ನೇತ್ರ ಆಸ್ಪತ್ರೆಗೆ ಮಾಹಿತಿ ನೀಡಬೇಕು. ನೇತ್ರದಾನ ಮಹಾದಾನ ಎಂಬ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದರು.

ವಿದ್ಯಾರ್ಥಿಗಳಿಗೆ ಅಕಾಡೆಮಿಕ್‌ ವಿಮೆ: ‘ತಂದೆ ತಾಯಿ ಮೃತಪಟ್ಟರೆ ವಿದ್ಯಾರ್ಥಿಗಳು ವ್ಯಾಸಂಗ ಮೊಟಕುಗೊಳಿಸುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ನಾವು ಅಕಾಡೆಮಿಕ್‌ ವಿಮೆ ಜಾರಿಗೊಳಿಸಿದ್ದೇವೆ. ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದೇವೆ. ಇದು ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಹೊಸ ಹೆಜ್ಜೆ. ಹೀಗೆ ಅನೇಕ ವಿದ್ಯಾರ್ಥಿ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ’ ಎಂದು ಕುಲಪತಿ ಸಚ್ಚಿದಾನಂದ ತಿಳಿಸಿದರು.

ವಿಶ್ವವಿದ್ಯಾಲಯದ ವತಿಯಿಂದ ಆರೋಗ್ಯ ಜಾಗೃತಿಗಾಗಿ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು. ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ, ಆರೋಗ್ಯದ ಮಹತ್ವ ಸಾರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT