ಶನಿವಾರ, ಅಕ್ಟೋಬರ್ 24, 2020
23 °C

‘ಉತ್ತರ’ದಲ್ಲಿ ವರ್ಷಧಾರೆ; ಹಳ್ಳದಲ್ಲಿ ಕೊಚ್ಚಿಹೋದ ಮಹಿಳೆ, ವ್ಯಕ್ತಿಯ ಶವ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅಳ್ಳೊಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಯುವ ರೈತ ಅಯ್ಯಪ್ಪ ಮೋನಪ್ಪ ನಡುವಿನಕೇರಿ ಎಂಬುವವರು (26) ಮೃತಪಟ್ಟಿದ್ದಾರೆ.

ಹಳ್ಳದಲ್ಲಿ ಭಾನುವಾರ ಕೊಚ್ಚಿಹೋಗಿದ್ದ ಕಲಬುರ್ಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮರಗುತ್ತಿ ತಾಂಡಾದ ಶಾಂತಾಬಾಯಿ ಹೋಬು ರಾಠೋಡ (40) ಹಾಗೂ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಸಮೀಪದ ನಾರಿಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ವಡ್ಡು ಗ್ರಾಮದ ಕೊರವರ ಚೆನ್ನಪ್ಪ (65) ಅವರ ಮೃತದೇಹಗಳು ಸೋಮವಾರ ಪತ್ತೆಯಾಗಿವೆ.

ಚಿಂಚೋಳಿ ಬಳಿಯ ಕೋಡ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಕುರಿಗಳು ಮೃತಪಟ್ಟಿವೆ. ಭಾರಿ ಮಳೆಯಿಂದಾಗಿ ಕಲಬುರ್ಗಿಯಿಂದ ಸೇಡಂಗೆ ಸಂಪರ್ಕ ಕಲ್ಪಿಸುವ ಮಳಖೇಡ ಸೇತುವೆ ಜಲಾವೃತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಜಮೀನಿನ ತಗ್ಗುಪ್ರದೇಶದ ಬೆಳೆ ಹಾನಿಯಾಗಿದೆ. ಬೀದರ್‌,ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ‌ಸತತ ಮೂರನೇ ದಿನವು ಭಾರಿ ಮಳೆ ಸುರಿಯಿತು.

ಮುಂದುವರಿದ ಮಳೆ: ಕಾರವಾರ, ಶಿರಸಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. 

ವಿಜಯಪುರ ಜಿಲ್ಲೆಯ ವಿವಿಧೆಡೆ ನಾಲ್ಕು ಮನೆಗಳು ಪೂರ್ಣ ಹಾಗೂ 156 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ತಾಲ್ಲೂಕಿನ ಅತ್ತಾಲಟ್ಟಿ ಬಳಿ ಹಳ್ಳದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತ್ತಿದ್ದ ಬಂದೇನವಾಜ್ ಮೊಕಾಶಿ ಎಂಬುವವರನ್ನು ಅಗ್ನಿಶಾಮಕ ಸಿಬ್ಬಂದಿ
ರಕ್ಷಿಸಿದ್ದಾರೆ. ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹ ತಲೆದೋರಿದೆ. ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯ ಜಲಾವೃತವಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳತಾಲ್ಲೂಕಿನ ಘಟಪ್ರಭಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿ ಮಿರ್ಜಿ ಗ್ರಾಮದ ಸೇತುವೆ ಮುಳುಗಡೆ ಆಗಿದೆ. ಹುನಗುಂದ ಪಟ್ಟಣದಲ್ಲಿ 10ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

ಬೆಳಗಾವಿ ಜಿಲ್ಲೆಯ ಸವದತ್ತಿಯ ಐತಿಹಾಸಿಕ ಮಹತ್ವದ ಕೋಟೆಯ ಪ್ರವೇಶ ದ್ವಾರದ ಬಳಿ ಹಾಗೂ ಕೋಟೆಯೊಳಗಿನ ಬಾವಿ ಸಮೀಪದ ಗೋಡೆಗಳು ಭಾಗಶಃ ಕುಸಿದಿವೆ. ಹುಕ್ಕೇರಿಯಹಳ್ಳದಕೇರಿ ಮತ್ತು ಗಾಂಧಿ ನಗರದಲ್ಲಿ 35 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನಲ್ಲಿ 55 ಮನೆಗಳು ಕುಸಿದು ಬಿದ್ದಿವೆ.

ದಟ್ಟ ಮಂಜಿನ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದಾಗಿವಿಮಾನಗಳ ಹಾರಾಟಕ್ಕೂ ತೊಂದರೆಯಾಯಿತು. ‘ಬೆಳಗಾವಿಯ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಇಳಿಯಬೇಕಿದ್ದ ತಿರುಪತಿ–ಬೆಳಗಾವಿ, ಹೈದರಾಬಾದ್–ಬೆಳಗಾವಿ ಮತ್ತು ಬೆಂಗಳೂರು–ಬೆಳಗಾವಿ ವಿಮಾನಗಳನ್ನು ಕ್ರಮವಾಗಿ ತಿರುಪತಿ, ಹುಬ್ಬಳ್ಳಿ ಹಾಗೂ ಹೈದರಾಬಾದ್‌ನಲ್ಲಿ ಇಳಿಸಲಾಯಿತು. ಮಂಜು ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದರಿಂದ ಇಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗಿಲ್ಲ’ ಎಂದು ವಿಮಾನನಿಲ್ದಾಣದ ನಿರ್ದೇಶಕ ರಾಜೇಶ್‌ಕುಮಾರ್
ಮೌರ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

 ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಉತ್ತಮ ಮಳೆ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು