ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜುಲೈ 12ರಿಂದ 16ರವರೆಗೆ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಈ ಜಿಲ್ಲೆಗಳಲ್ಲಿ 16ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ’.
‘ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, 3.7 ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿರುವುದರಿಂದ ಈ ಸಮಯದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದೂ ಇಲಾಖೆ ಎಚ್ಚರಿಸಿದೆ.
‘ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ಕಲಬುರ್ಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲೂ ಗುಡುಗು, ಸಿಡಿಲು ಸಹಿತ ವ್ಯಾಪಕ ಮಳೆ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ನೀಡಿರುವುದಾಗಿ ತಿಳಿಸಿದೆ.
ಮಳೆ–ಎಲ್ಲಿ, ಎಷ್ಟು?: ಶಿವಮೊಗ್ಗ ಜಿಲ್ಲೆಯ ಆಗುಂಬೆ ಭಾಗದಲ್ಲಿ ಭಾನುವಾರ 13 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಕುಂದಾಪುರ, ಭಟ್ಕಳ 10, ಮಂಗಳೂರು 9, ಪುತ್ತೂರು 6, ಸುಳ್ಯ , ಮೂಡುಬಿದರೆ, ಕಾರವಾರ, ಮಡಿಕೇರಿ 5, ಬೆಳ್ತಂಗಡಿ 4, ಕಾರ್ಕಳ, ಕಮಲಾಪುರ 3, ಚಿಂಚೋಳಿ 2, ಕೊಪ್ಪ, ಸಾಗರ ಹಾಗೂ ತುಮಕೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.