ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ಅಪಾರ ಪ್ರಮಾಣದ ನಷ್ಟ; ಕೃಷಿ ಜಮೀನಿಗೆ ನುಗ್ಗಿದ ನೀರು

ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳಗಳು l ಕೊಳೆಯುತ್ತಿರುವ ಬೆಳೆಗಳು
Last Updated 22 ನವೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿವಿಧೆಡೆ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಲಕ್ಷಾಂತರ ಹೆಕ್ಟೇರ್‌ ಕೃಷಿ ಜಮೀನಿಗೆ ನೀರು ನುಗ್ಗಿದೆ. ಭತ್ತ, ರಾಗಿ, ಮೆಕ್ಕೆಜೋಳ, ತರಕಾರಿ ಬೆಳೆಗಳು ನಿಂತ ನೀರಿನಲ್ಲಿ ಕೊಳೆಯುತ್ತಿವೆ. ಅಪಾರ ಸಂಖ್ಯೆಯಲ್ಲಿ ಮನೆಗಳು ಕುಸಿದಿವೆ. ಹಾನಿಯ ನಿಖರ ಚಿತ್ರಣ ಇನ್ನೂ ಲಭ್ಯವಾಗಿಲ್ಲ.

ಪ್ರಾಥಮಿಕ ಅಂದಾಜಿನ ಪ್ರಕಾರ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಈ ಐದೂ ಜಿಲ್ಲೆಗಳ ವ್ಯಾಪ್ತಿಯಲ್ಲಿ 2.57 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಜೋಳ ಸೇರಿದಂತೆ ತೋಟಗಾರಿಕೆ ಬೆಳೆ ಹಾನಿಗೀಡಾಗಿವೆ. ಇದರಿಂದ ₹ 484.18 ಕೋಟಿಯ ನಷ್ಟ ಅಂದಾಜಿಸಲಾಗಿದೆ. 1,595 ಮನೆಗಳು ಹಾನಿಗೀಡಾಗಿದ್ದು, 12 ಜನರು ಮೃತಪಟ್ಟಿದ್ದಾರೆ. ರಾಮನಗರ ಜಿಲ್ಲೆಯೊಂದರಲ್ಲಿ 40,419 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ರಾಗಿ ನೆಲ ಕಚ್ಚಿದೆ.

ಮೈಸೂರು ಭಾಗದ ನಾಲ್ಕು ಜಿಲ್ಲೆಗಳಲ್ಲಿ ಈವರೆಗೆ 2,404 ಮನೆಗಳಿಗೆ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ 1,994 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 40 ಸಂಪೂರ್ಣ ಕುಸಿದಿದೆ. ಹಾಸನದಲ್ಲಿ 59 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಎರಡು ಮನೆ ಕುಸಿದಿದೆ. ಚಾಮರಾಜನಗರ ಜಿಲ್ಲೆಯಲ್ಲಿ 349 ಮನೆಗಳಿಗೆ ಭಾಗಶಃ ಹಾನಿಯಾಗಿದೆ.‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದ ಈವರೆಗೆ ಐವರು ಮೃತಪಟ್ಟಿದ್ದು, 131 ಮನೆಗಳು ಪೂರ್ಣ ಹಾನಿಯಾಗಿದ್ದು, 706 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 74,938 ಹೆಕ್ಟೇರ್‌ ಕೃಷಿ ಹಾಗೂ 283 ಹೆಕ್ಟೇರ್‌ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ. 224 ಕಿ.ಮೀ. ರಸ್ತೆಗೆ ಹಾನಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ 112 ಹೆಕ್ಟೇರ್ ಭತ್ತದ ಬೆಳೆ ನಾಶವಾದರೆ, 121.66 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಜುಲೈನಿಂದ ನ. 21ರವರೆಗೆ 572 ಮನೆಗಳಿಗೆ ಹಾನಿಯಾಗಿದೆ. 18,994 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 12,503 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾಗೂ 6,491 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ.‌

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಮನೆಗಳು ಬಿದ್ದಿವೆ. ನ. 19ರಂದು ಮಾತ್ರ ಹಾವೇರಿ ಜಿಲ್ಲೆಯಲ್ಲಿ 567, ಗದಗ ಜಿಲ್ಲೆಯಲ್ಲಿ 388 ಮನೆಗಳಿಗೆ ಹಾನಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ 22 ಮನೆ ಸಂಪೂರ್ಣ ಹಾಗೂ 188 ಮನೆ ಭಾಗಶಃ ಹಾಳಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ 32 ಮನೆಗಳು ಕುಸಿದಿವೆ. 239 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇಬ್ಬರು ಸಾವಿಗೀಡಾಗಿದ್ದಾರೆ. ಒಂದು ವಾರದಲ್ಲಿ ವಾಡಿಕೆಗಿಂತ ಶೇ 230ರಷ್ಟು ಹೆಚ್ಚು ಮಳೆಯಾಗಿದೆ. ‌ಬೆಳಗಾವಿ ಹಾಗೂ ಖಾನಾಪುರ ತಾಲ್ಲೂಕಿನಲ್ಲಿ 5,367 ಹೆಕ್ಟೇರ್ ಭತ್ತ ಹಾಗೂ 500 ಹೆಕ್ಟೇರ್ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 42 ಮನೆಗಳು ಕುಸಿದಿವೆ. ವಿಜಯಪುರ ಜಿಲ್ಲೆಯಲ್ಲಿಯೂ ದ್ರಾಕ್ಷಿ ಬೆಳೆಗೆ ತೊಂದರೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಸುಮಾರು 3,500 ಹೆಕ್ಟೇರ್‌ ಕೃಷಿ ಬೆಳೆ ಹಾಳಾಗಿದೆ. ಅದರಲ್ಲಿ ಶೇ 90ರಷ್ಟು ಭತ್ತವೇ ಇದೆ. ಜಿಲ್ಲೆಯಲ್ಲಿ 53 ಮನೆಗಳು ಪೂರ್ಣ ಹಾನಿಗೊಳಗಾಗಿದೆ. 263 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಭತ್ತ, ಮೆಕ್ಕೆಜೋಳ, ಶೇಂಗಾ, ಟೊಮೆಟೊ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ. ಸದ್ಯ 3,500 ಹೆಕ್ಟೇರ್‌ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 33,800 ಹೆಕ್ಟೇರ್ ಶೇಂಗಾ, 10,424 ಹೆಕ್ಟೇರ್ ರಾಗಿ, 10,699 ಹೆಕ್ಟೇರ್ ಮೆಕ್ಕೆಜೋಳ ಸೇರಿ ಒಟ್ಟು 66,387 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿವೆ. ಹಣ್ಣು, ಹೂವು ಸೇರಿ 249 ಹೆಕ್ಟೇರ್‌ ತೋಟಗಾರಿಕೆ ಬೆಳೆಯೂ ನಾಶವಾಗಿದೆ. ಜಿಲ್ಲೆಯಲ್ಲಿ 567 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂದು ವಾರದ ಅವಧಿಯಲ್ಲಿ ಮನೆಯ ಗೋಡೆ ಕುಸಿದು ಆರು ಮಂದಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 270 ಹೆಕ್ಟೇರ್ ಭತ್ತ, 78 ಹೆಕ್ಟೇರ್ ಮೆಕ್ಕೆಜೋಳ ಸೇರಿ ಒಟ್ಟು 348 ಹೆಕ್ಟೇರ್‌ ಕೃಷಿ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ 32 ಮನೆಗಳಿಗೆ ಹಾನಿಯಾಗಿದೆ.

ಜಕ್ಕೂರಿನಲ್ಲಿ ದಾಖಲೆ ಮಳೆ

ರಾಜ್ಯದ ಬಹುತೇಕ ಕಡೆ ಭಾನುವಾರ (ನ.21) ರಾತ್ರಿ 8 ಗಂಟೆಯಿಂದ ಸೋಮವಾರ (ನ. 22) ಬೆಳಿಗ್ಗೆ 8 ಗಂಟೆವರೆಗೆ ಭಾರಿ ಮಳೆ ಬಿದ್ದಿದೆ. ಮಳೆ ಮಾಪನ ಕೇಂದ್ರಗಳ ಪೈಕಿ, ಯಲಹಂಕದ ಜಕ್ಕೂರಿನಲ್ಲಿರುವ ಮಾಪನ ಕೇಂದ್ರದಲ್ಲಿ ಅತ್ಯಧಿಕ ಮಳೆ (15.30 ಸೆಂ.ಮೀ) ದಾಖಲಾಗಿದೆ. ನಗರದ ಉತ್ತರ ಭಾಗದಲ್ಲಿ ಸುರಿದ ಬಿರುಸಿನ ಮಳೆಗೆ ಯಲಹಂಕ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರವಾಹದ ಪರಿಸ್ಥಿತಿಯಲ್ಲಿ ಮುಳುಗಿದ್ದವು.

ಬೆಳೆ ಹಾನಿ: ಇಬ್ಬರು ಆತ್ಮಹತ್ಯೆ

ಒಂದು ವಾರದಿಂದ ಸುರಿದ ಮಳೆಯಿಂದ ರಾಯಚೂರು ಜಿಲ್ಲೆಯಲ್ಲಿ ಅಂದಾಜು 40,534 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ನಾಲ್ಕು ಎಕರೆ ಭತ್ತದ ಬೆಳೆ ಹಾನಿಯಾಗಿದ್ದರಿಂದ ಲಿಂಗಸಗೂರು ತಾಲ್ಲೂಕು ಭೋಗಾಪುರ ಗ್ರಾಮದ ವೀರನಗೌಡ (50) ಭಾನುವಾರ ರಾತ್ರಿ ಜಮೀನಿನಲ್ಲಿಯ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಎಕರೆಯಲ್ಲಿ ತೊಗರಿ ಬೆಳೆ ಹಾನಿಯಾಗಿದ್ದರಿಂದ ತುರಡಗಿ ಗ್ರಾಮದ ರೈತ ಸಿದ್ದಪ್ಪ (50) ಸೋಮವಾರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 18,825 ಹೆಕ್ಟೇರ್, ಯಾದಗಿರಿ ಜಿಲ್ಲೆಯಲ್ಲಿ 1,342 ಹೆಕ್ಟೇರ್‌ ಭತ್ತದ ಬೆಳೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT