ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ವಿರುದ್ಧ ಎಫ್‌ಐಆರ್‌ಗೆ ಹಿಂದೇಟು: ಆರೋಪ

ಹರ್ಷ ಹತ್ಯೆ ಪ್ರಕರಣ: ಇನ್ನೂ ಇಬ್ಬರ ಬಂಧನ
Last Updated 23 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಸಚಿವ ಕೆ.ಎಸ್‌. ಈಶ್ವರಪ್ಪ, ನಗರ ಪಾಲಿಕೆ ಸದಸ್ಯ ಎಸ್‌.ಎನ್‌. ಚನ್ನಬಸಪ್ಪ ಅವರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಒಂದು ಸಮುದಾಯದ ಜೀವಿಸುವ ಹಕ್ಕನ್ನೇ ಕಿತ್ತುಕೊಳ್ಳುವಂತೆ ಅಪಪ್ರಚಾರ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದೇವೆ. ಆದರೆ, ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಶಿವಮೊಗ್ಗ ಪೀಸ್‌ ಆರ್ಗನೈಶೇಷನ್‌ ಅಧ್ಯಕ್ಷ ರಿಯಾಜ್‌ ಅಹಮದ್‌ ಬುಧವಾರ ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ನ್ಯಾಯಾಧೀಶರು ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅವರು ದೂರು ಸಲ್ಲಿಸಿದ್ದಾರೆ.

ಬಂಧಿತರ ಸಂಖ್ಯೆ 8ಕ್ಕೆ ಏರಿಕೆ: ಹರ್ಷ ಹತ್ಯೆ ಪ್ರಕರಣದಲ್ಲಿ ಬುಧವಾರ ಮತ್ತಿಬ್ಬರು ಆರೋಪಿಗಳನ್ನು ತನಿಖಾ ತಂಡ ಬಂಧಿಸಿದೆ. ಈ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಇಲಿಯಾಸ್‌ ನಗರದ ಫರಾಜ್‌ ಪಾಷಾ (24), ವಾದಿ ಎ ಹುದಾ ನಗರದ ಅಬ್ದುಲ್‌ ಖಾದರ್ ಜಿಲಾನ್ (25) ಬಂಧಿತ ಆರೋಪಿಗಳು. ಇಬ್ಬರ ಮೇಲೆ ಕೊಲೆಗೆ ಸಹಕರಿಸಿದ, ನಂತರ ತಪ್ಪಿಸಿಕೊಳ್ಳಲು ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ದಾಖಲಿಸ ಲಾಗಿದೆ.

ಎಸ್‌.ಪಿ ಹೇಳಿದ್ದೇನು?: ‘ಹತ್ಯೆಗೂ ಮೊದಲು ಇಬ್ಬರು ಯುವತಿಯರು ಮೊಬೈಲ್‌ ಕರೆ ಮಾಡಿದ್ದರು ಎನ್ನುವ ವಿಷಯ ಈಗಷ್ಟೆ ಪ್ರಸಾರವಾಗುತ್ತಿದೆ. ಹರ್ಷ ಅವರ ಮೊಬೈಲ್‌ ಪತ್ತೆಯಾಗದೇ ಇಂಥ ವಿಷಯಗಳ ಕುರಿತು ಖಚಿತ ಪಡಿ ಸಲಾಗದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.

ಹತ್ಯೆಗೆ ಇಬ್ಬರು ಯುವತಿಯರ ಬಳಕೆ?

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಯೋಜನೆ ರೂಪಿಸಿದ್ದ ಆರೋಪಿಗಳು ಅವರನ್ನು ಮನೆಯಿಂದ ಹೊರಗೆ ಬರುವಂತೆ ಮಾಡಲು ಇಬ್ಬರು ಯುವತಿಯರನ್ನು ಬಳಸಿಕೊಂಡಿದ್ದರು ಎನ್ನುವ ಅಂಶ ಚರ್ಚೆಗೆ ಗ್ರಾಸವಾಗಿದೆ.

‘ಫೆ.20ರ ರಾತ್ರಿ 9ರ ಸುಮಾರಿಗೆ ಹರ್ಷ ಅವರ ಮೊಬೈಲ್‌ಗೆ ವಿಡಿಯೊ ಕಾಲ್ ಮಾಡಿದ್ದ ಇಬ್ಬರು ಯುವತಿಯರು ತಮ್ಮನ್ನು ಪರಿಚಯಿಸಿಕೊಂಡು, ತುರ್ತು ಸಹಾಯ ಬೇಕೆಂದು ಬರಲು ಕರೆದರು. ಇಬ್ಬರು ಇದ್ದಿದ್ದರಿಂದ ಬೈಕ್‌ ತರದೆ ನಡೆದುಕೊಂಡು ಬರುವಂತೆ ಹೇಳಿದರು. ಭಾರತಿ ಕಾಲೊನಿ ಬಳಿ ಜತೆಯಾಗುವುದಾಗಿ ಅವರು ವಿನಂತಿಸಿದ್ದರು’ ಎಂದು ಹರ್ಷನ ಸ್ನೇಹಿತ ನವೀನ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ಹರ್ಷ, ಆನಂದ್‌, ಮಂಜ ಹಾಗೂ ನಾನು ಜತೆಯಲ್ಲೇ ಇದ್ದೆವು. ವಿಡಿಯೊ ಕಾಲ್‌ ಮಾಡಿದಾಗಲೇ ಅವರನ್ನು ಹರ್ಷ ನಮಗೆ ತೋರಿಸಿದ. ಇವರ ಪರಿಚಯ ಇದೆಯೇ ಎಂದು ಕೇಳಿದ? ನಾವು ಇಲ್ಲ ಎಂದಾಗ, ನಡೆದೇ ಹೊರಟೆವು. ಸ್ವಲ್ಪ ದೂರ ಹೋದ ನಂತರ ಬೈಕ್‌ ತರಲು ನಮ್ಮನ್ನು ಕಳುಹಿಸಿದ. ನಾವು ಬೈಕ್‌ ತೆಗೆದು ಕೊಂಡು ಅಲ್ಲಿಗೆ ತೆರಳುವಷ್ಟರಲ್ಲೇ ಹರ್ಷನ ಕೊಲೆಯಾಗಿತ್ತು’ ಎಂದರು.

‘ಮನೆಯಲ್ಲೇ ಅಡುಗೆ ಮಾಡಿದ್ದರೆ, ಹೊರ ಹೋಗುತ್ತಿರಲಿಲ್ಲ’

‘ಅಂದು ಸಂಕಷ್ಟಿ ಇದ್ದ ಕಾರಣ ನಾನು ಮನೆಯಲ್ಲಿ ಅಡುಗೆ ಮಾಡಿರಲಿಲ್ಲ. ರಾತ್ರಿ ಮನೆಗೆ ಬಂದ ಹರ್ಷ ಊಟ ಇದೆಯೇ ಎಂದ. ಮಧ್ಯಾಹ್ನದ ಸಾಂಬಾರ್ ಇದೆ ಎಂದೆ. ‘ಇರು, ಊಟ ತರುತ್ತೇನೆ’ ಎಂದು ಹೇಳಿ ಹೋದ. ಮನೆಯಲ್ಲೇ ಅಡುಗೆ ಮಾಡಿ ದ್ದರೆ ಹೊರಗೆ ಹೋಗುತ್ತಿರಲಿಲ್ಲ’ ಎಂದು ಹರ್ಷ ಅವರ ತಾಯಿ ಪದ್ಮಾ ಕಣ್ಣೀರು ಸುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT