ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಹಟ್ಟಿ’ ಶಾಲೆಯಲ್ಲಿ ಹೈಟೆಕ್ ಶೌಚಾಲಯ

ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನದಿಂದ ನಿರ್ಮಾಣ
Last Updated 24 ಸೆಪ್ಟೆಂಬರ್ 2020, 22:56 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಭೂತರಾಮನ ಹಟ್ಟಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ‘ಸ್ಟಾರ್‌ ಹೋಟೆಲ್‌ ಮಾದರಿ’ಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ.

ಕೋವಿಡ್–19 ಲಾಕ್‌ಡೌನ್‌ಗೆ ಮುನ್ನ ಆರಂಭವಾಗಿದ್ದ ಕಾಮಗಾರಿ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿದೆ. ಬೆಳಗಾವಿಯ ಕುಲಗೋಡ ವೈದ್ಯ ದಂಪತಿ ‘ರಾಜಲಕ್ಷ್ಮಿ ಮಕ್ಕಳ ಪ್ರತಿಷ್ಠಾನ’ದಿಂದ ಈ ಶೌಚಾಲಯವನ್ನು ಕೊಡುಗೆ ನೀಡಿದ್ದಾರೆ.

ಚಿಕ್ಕ ಹಾಗೂ ಹಳೆಯದಾಗಿದ್ದ ಶೌಚಾಲಯ ಕೆಡವಿ ಹೊಸದಾಗಿ ₹ 7.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಶಾಲೆಯದ್ದೇ ಕೊಳವೆಬಾವಿ ಇರುವುದರಿಂದ ಟ್ಯಾಂಕ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಆಗಿದೆ. ಇಂಗು ಬಚ್ಚಲು ಗುಂಡಿ ನಿರ್ಮಿಸಲಾಗಿದೆ.

320 ವಿದ್ಯಾರ್ಥಿಗಳು: ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದೆ. 186 ಬಾಲಕಿಯರು ಹಾಗೂ134 ಬಾಲಕರು ಸೇರಿ 320 ವಿದ್ಯಾರ್ಥಿಗಳು, 10 ಮಂದಿ ಶಿಕ್ಷಕ, ಶಿಕ್ಷಕಿಯರಿದ್ದಾರೆ.

‘ಇಲ್ಲಿ ಹಿಂದೆ ಇದ್ದ ಶೌಚಾಲಯ ಹಳೆಯದಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಸಾಲುತ್ತಿರಲಿಲ್ಲ. ಈ ವಿಷಯವನ್ನು ಡಾ.ಶಶಿಕಾಂತ ಕುಲಗೋಡ ಗಮನಕ್ಕೆ ತಂದಿದ್ದೆವು. ಅತ್ಯಾಧುನಿಕ ಸೌಲಭ್ಯಗಳುಳ್ಳ ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ’ ಎಂದು ಶಿಕ್ಷಕ ಬಸವರಾಜ ಸುಂಗಾರಿ ತಿಳಿಸಿದರು.

‘ಆ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ಒದಗಿಸಿದ್ದೇವೆ. ಅದರ ಉದ್ಘಾಟನೆಗೆ ಹೋಗಿದ್ದಾಗ ಅಲ್ಲಿನ ಶೌಚಾಲಯದ ವ್ಯವಸ್ಥೆ ಚೆನ್ನಾಗಿಲ್ಲದಿರುವುದು ಗಮನಕ್ಕೆ ಬಂತು. ಈಗ ಶಾಲೆಗೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಚಿಕ್ಕ ಕಾಣಿಕೆ ನೀಡಿದ್ದೇವೆ’ ಎಂದು ರಾಜಲಕ್ಷ್ಮಿ ಪ್ರತಿಷ್ಠಾನದ ಡಾ.ಶಶಿಕಾಂತ ಕುಲಗೋಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕೋವಿಡ್–19ನಿಂದಾಗಿ ಶಾಲೆಗೆ ರಜೆ ಇದೆ. ಆ ಸಮಯ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಶ್ವ ಶೌಚಾಲಯ ದಿನವಾದ ನ.19ರಂದು ಅಧಿಕೃತ ಉದ್ಘಾಟನೆಗೆ ಯೋಜಿಸಲಾಗಿದೆ’ ಎಂದರು. ಬಾಲಕಿಯರ ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸುಡುವಯಂತ್ರವನ್ನು ಸರ್ಕಾರದಿಂದ ಒದಗಿಸಲಾಗಿದೆ.

ಕೈತೊಳೆಯುವ ವಿಧಾನದ ಮಾಹಿತಿ
ಕೈತೊಳೆಯುವ ವಿಧಾನ ಹಾಗೂ ಪ್ರಯೋಜನಗಳ ಬಗ್ಗೆ ಶೌಚಾಲಯದಲ್ಲಿ ಮಾಹಿತಿ ನೀಡಲಾಗಿದೆ. ಗೋಡೆಗಳ ಮೇಲೆ ಅಲ್ಲಲ್ಲಿ ಆಕರ್ಷಕ ಪ್ರಕೃತಿಯ ಚಿತ್ರಗಳನ್ನು ಹಾಕಲಾಗಿದೆ. ಹೊರ ಆವರಣದಲ್ಲಿ ಹಳೆಯ ಟೈರ್‌ಗಳು, ಬಕೆಟ್‌ಗಳಿಗೆ ಬಣ್ಣ ಬಳಿದು ಅವುಗಳೊಳಗೆ ಸಸಿಗಳನ್ನು ಬೆಳೆಸಿ ಆಕರ್ಷಕಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT