ಶನಿವಾರ, ಅಕ್ಟೋಬರ್ 24, 2020
18 °C
ತನಿಖಾ ಸಂಸ್ಥೆಗಳಿಗೆ ಹೈಕೋರ್ಟ್‌ ಸಲಹೆ

ಡ್ರಗ್ಸ್‌ ಜಾಲ ಭೇದಿಸಲು ‘ಚಾಣಕ್ಯ’ ನೀತಿ ಅನುಸರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯಲು ತನಿಖಾ ಸಂಸ್ಥೆಗಳು ಚಾಣಕ್ಯ ನೀತಿ ಅನುಸರಿಸುವ ಅಗತ್ಯ ಇದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 

ಎನ್‌ಸಿಬಿ(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ) ಅಧಿಕಾರಿಗಳು ವ್ಯಕ್ತಿಯೊಬ್ಬರಿಂದ 15.55 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದ ಪ್ರಕರಣವನ್ನು ಪೂರಕ ದಾಖಲೆಗಳಿಲ್ಲದ ಕಾರಣಕ್ಕೆ ರದ್ದುಪಡಿಸಿದ ನ್ಯಾಯಮೂರ್ತಿ ಬಿ.ಎ. ಪಾಟೀಲ, ತನಿಖೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.

‘ಡ್ರಗ್ಸ್ ಜಾಲದ ಭೀತಿ ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಯುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದನ್ನು ಬುಡಸಮೇತ ಕಿತ್ತೆಸೆಯಲು ಚಾಣಕ್ಯನ ರೀತಿಯ ದೃಢ ಮನಸ್ಸು ಇರಬೇಕು’ ಎಂದು ಹೇಳಿದರು.

2013ರ ಆಗಸ್ಟ್ 27ರಂದು ಅಬ್ದುಲ್ ಅಲೀಮ್ ಎಂಬುವರನ್ನು ಬಂಧಿಸಿದ್ದ ಎನ್‌ಸಿಬಿ ಪೊಲೀಸರು, 15.55 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದರು. ಈ ಪ್ರಕರಣ ಕೈಬಿಡುವಂತೆ ಅಬ್ದುಲ್ ಅಲೀಮ್ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಹಸ್ಮತ್‌ ಪಾಷಾ, ‘ವಶಪಡಿಸಿಕೊಂಡಿರುವುದು 15.55 ಕೆಜಿ ಗಾಂಜಾ ಎಂದು ಮಾತ್ರ ಹೇಳಲಾಗಿದೆ. ಗಾಂಜಾ ಗಿಡದಲ್ಲಿದ್ದ ಬೀಜ, ಕಡ್ಡಿ ಮತ್ತು ಎಲೆಯನ್ನು ಪ್ರತ್ಯೇಕಿಸಿಲ್ಲ. ಅದರಲ್ಲಿದ್ದ ಹೂವಿನ ಅಂಶ ಎಷ್ಟು, ಮೊಗ್ಗಿನ ಅಂಶ ಎಷ್ಟು ಎಂಬುದನ್ನು ದಾಖಲಿಸಿಲ್ಲ. ಅದರಲ್ಲಿ ಟೆಟ್ರೊಹೈಡ್ರೊಕೆನಾಬಿನಾಲ್ (ಗಾಂಜಾ ಗಿಡದಲ್ಲಿರುವ ಪ್ರಮುಖ ಸಕ್ರಿಯ ಘಟಕಾಂಶ) ಅಂಶ ಎಷ್ಟಿದೆ ಎಂಬುದನ್ನೂ ಹೇಳಿಲ್ಲ. ಹೀಗಾಗಿ, ಪ್ರಕರಣ ಎನ್‌ಡಿಪಿಎಸ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ವಾದಿಸಿದರು.

ಪಂಚನಾಮೆ ಸರಿಯಾಗಿ ಮಾಡದ ಕಾರಣ ಗಾಂಜಾ ಅಂಶ ಯಾವ ಪ್ರಮಾಣದಲ್ಲಿ ಇತ್ತು ಎಂಬುದನ್ನು ಗುರುತಿಸಲು ಆಗುತ್ತಿಲ್ಲ. ಈ ಪ್ರಕರಣದ ವಿಚಾರಣೆ ಮುಂದುವರಿಸಿದರೆ ನ್ಯಾಯಾಲಯದ ಸಮಯ ವ್ಯರ್ಥವಾಗಲಿದೆ ಎಂದು ಅಭಿಪ್ರಾಯಪಟ್ಟ ಪೀಠ, ಪ್ರಕರಣ ವಜಾಗೊಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು