ಬೆಂಗಳೂರು: ಮಲ್ಲತ್ತಹಳ್ಳಿ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ, ಶಿವನ ಪ್ರತಿಮೆ ಮತ್ತು ಕಾಂಕ್ರೀಟ್ ಕಟ್ಟಡ ನಿರ್ಮಾಣ ಆಕ್ಷೇಪಿಸಲಾದ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ತೋಟಗಾರಿಕಾ ಸಚಿವ ಮುನಿರತ್ನ ನಾಯ್ಡು ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
‘ಕೆರೆ ಪ್ರದೇಶದಲ್ಲಿನ ಅಕ್ರಮ ಕಟ್ಟಡ ಮತ್ತು ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಮಲ್ಲತ್ತಹಳ್ಳಿ ಕೆರೆ ಅಂಗಳದಲ್ಲಿ 35 ಅಡಿ ಎತ್ತರದ ಶಿವನ ಪ್ರತಿಮೆ ಮತ್ತು ಮನೋರಂಜನಾ ಕಾರ್ಯಕ್ರಮಗಳಿಗೆ ಅಗತ್ಯವಾದ ಸೌಕರ್ಯ ಕಲ್ಪಿಸಲು ಅನುಮತಿ ನೀಡಬೇಕು ಎಂದು ಕೋರಿ ರಾಜರಾಜೇಶ್ವರಿ ನಗರದ ಬಿಜೆಪಿ ಘಟಕದ ಅಧ್ಯಕ್ಷ ಎಂ. ಗೋವಿಂದರಾಜು ರಾಜರಾಜೇಶ್ವರಿ ನಗರ ವಲಯದ ಬಿಬಿಎಂಪಿ ಸಹಾಯಕ ಎಂಜಿನಿಯರ್ ಅವರಿಗೆ ಇದೇ 19ರಂದು ಪತ್ರ ಬರೆದಿದ್ದಾರೆ’ ಎಂದು ವಿವರಿಸಿದರು.
‘ಈ ಅರ್ಜಿಯಲ್ಲಿ ಬಯಲು ರಂಗಮಂದಿರಕ್ಕಾಗಿ ಬೃಹತ್ ಪ್ರಮಾಣದ ವೃತ್ತಾಕಾರದ ಕಾಂಕ್ರೀಟ್ ಕಟ್ಟಡ ನಿರ್ಮಾಣಕ್ಕೂ ಮನವಿ ಮಾಡಲಾಗಿದೆ. ಅಂತೆಯೇ, ಕೆರೆ ಅಂಗಳದಲ್ಲಿನ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಯಾವುದೇ ಸಕ್ಷಮ ಪ್ರಾಧಿಕಾರವು ಕಾರ್ಯಾದೇಶ ನೀಡಿಲ್ಲ. ಈ ಅಕ್ರಮ ಕಟ್ಟಡ ನಿರ್ಮಾಣದ ತ್ಯಾಜ್ಯದಿಂದಲೇ ಕೆರೆಯನ್ನು ತುಂಬಲಾಗುತ್ತಿದೆ. ಪರಿಣಾಮ ಕೆರೆಯ ವ್ಯಾಪ್ತಿ ಪ್ರದೇಶ ದಿನೇ ದಿನೇ ಕುಗ್ಗುತ್ತಿದೆ’ ಎಂದು ದೂರಿದರು.
ಇದನ್ನು ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ,
ಎಂ. ಗೋವಿಂದರಾಜು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗೂ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.