ಮಂಗಳವಾರ, ಜೂನ್ 28, 2022
26 °C

ಹೈಕೋರ್ಟ್‌ ಕಲಾಪ ನೇರ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್‌ ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯಾಯಾಲಯದ ವಿಚಾರಣೆಯ ನೇರ ಪ್ರಸಾರವನ್ನು ಯೂಟ್ಯೂಬ್‌ನಲ್ಲಿ ಸೋಮವಾರ ಪ್ರಸಾರ ಆರಂಭಿಸಲಾಯಿತು.

ಕಾರವಾರದ ಬಂದರು ಪ್ರದೇಶದಲ್ಲಿ ಕಾನೂನುಬಾಹಿರ ಅಭಿವೃದ್ಧಿ ಚಟುವಟಿಕೆಗಳ ಸಂಬಂಧ ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡಲಾಯಿತು.

ಅದಕ್ಕೂ ಮುಂಚಿತವಾಗಿಯೇ ವಕೀಲರಿಗೆ ಮಾಹಿತಿ ನೀಡಲಾಗಿತ್ತು. ‘ವಕೀಲರ ಗಮನಕ್ಕೆ ತರುವುದು ನಮ್ಮ ಕರ್ತವ್ಯ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮೌಖಿಕವಾಗಿಯೂ ಹೇಳಿದರು.

ಪ್ರಾಯೋಗಿಕವಾಗಿ ನೇರ ಪ್ರಸಾರ ಮಾಡಲಾಗಿದ್ದು, ಇದನ್ನು ಮುಂದುವರಿಸುವ ಬಗ್ಗೆ ಬರುವ ಅಭಿಪ್ರಾಯಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೋವಿಡ್ ಪ್ರಕರಣಗಳು ಉಲ್ಬಣಗೊಂಡ ಬಳಿಕ ವರ್ಚುಯಲ್ ಮಾದರಿಯಲ್ಲಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ನೇರ ಪ್ರಸಾರವನ್ನು ಹೈಕೋರ್ಟ್ ಆರಂಭಿಸಿದೆ.‌ ಗುಜರಾತ್ ಹೈಕೋರ್ಟ್ ಈ ಹಿಂದೆ ನೇರಪ್ರಸಾರ ಆರಂಭಿಸಿತ್ತು.

‘ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ಕೈಗೊಂಡಿರುವ ಈ ಕ್ರಮ ಶ್ಲಾಘನೀಯ. ಹೈಕೋರ್ಟ್‌ನ ಬೇರೆ ಕೊಠಡಿಗಳಲ್ಲೂ ನೇರ ಪ್ರಸಾರ ಕಲ್ಪಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ. ಜಿಲ್ಲಾ ನ್ಯಾಯಾಲಯಗಳಿಗೂ ಈ ಸೌಲಭ್ಯ ವಿಸ್ತರಣೆಯಾದರೆ ಸೂಕ್ತ. ಎಲ್ಲರಲ್ಲೂ ಹೆಚ್ಚಿನ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಣಬಹುದು’ ಎಂದು ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ. ಧನಂಜಯ ಅಭಿಪ್ರಾಯಪಟ್ಟರು.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು