ಶನಿವಾರ, ಜೂನ್ 12, 2021
28 °C
ನಿಮ್ಮ ಕ್ಷೇತ್ರಗಳಲ್ಲಿ ಹಾಸಿಗೆ ಸಂಖ್ಯೆ ಎಷ್ಟು ಹೆಚ್ಚಿಸಿದ್ದೀರಿ?

ಕೋವಿಡ್‌: ಕಾಂಗ್ರೆಸ್‌ ಶಾಸಕರ ಕೊಡುಗೆ ಪ್ರಶ್ನಿಸಿದ ಹೈಕೊರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಿಯಂತ್ರಣ ಸಂಬಂಧ ವಿವಿಧ ವಿಷಯಗಳ ಕುರಿತು ಮೂವರು ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ಸಾರ್ಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ವಿಲೇವಾರಿ ಮಾಡಿದೆ.

ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್, ಎಚ್‌.ಕೆ. ಪಾಟೀಲ, ಎಸ್‌.ಆರ್‌. ಪಾಟೀಲ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ವಿಶೇಷ ವಿಭಾಗೀಯ ಪೀಠ, ‘ಕೋವಿಡ್‌ ಎದುರಿಸಲು ನೀವುಗಳು ನೀಡಿರುವ ಕೊಡುಗೆ ಏನು’ ಎಂದು ಪ್ರಶ್ನಿಸಿತು

‘ಕಳೆದ ಒಂದು ವರ್ಷದ ಅವಧಿಯಲ್ಲಿ 800 ಪುಟಗಳಷ್ಟು ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಶಾಸಕರಾಗಿ ನಿಮ್ಮ ಕ್ಷೇತ್ರಗಳಲ್ಲಿ ಎಷ್ಟು ಹಾಸಿಗೆಗಳನ್ನು ಹೆಚ್ಚಿಸಿದ್ದೀರಿ, ವೈದ್ಯಕೀಯ ತುರ್ತು ಸಂದರ್ಭಕ್ಕೆ ಆಮ್ಲಜನಕ ಸಂಗ್ರಹಿಸಲು ಏನು ಕೊಡುಗೆ ನೀಡಿದ್ದೀರಿ’ ಎಂದು ಪ್ರಶ್ನಿಸಿತು. ಅರ್ಜಿ ವಿಲೇವಾರಿಗೂ ಮೊದಲು ಪ್ರತಿಕ್ರಿಯೆ ಸಲ್ಲಿಸುವಂತೆ ಸರ್ಕಾರಕ್ಕೂ ನಿರ್ದೇಶನ ನೀಡಿತು.

’ಹಳ್ಳಿಗಳಲ್ಲೂ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಿಸಲು ವ್ಯವಸ್ಥೆ ಮತ್ತು ರಾಜ್ಯದ ಮೂಲೆ ಮೂಲೆಗೂ ತಲುಪುವ ಸಂಚಾರಿ ಪ್ರಯೋಗಾಲಯ ತೆರೆಯಲು ನಿರ್ದೇಶನ ನೀಡಬೇಕು’ ಎಂದು ಕೆ.ಆರ್. ರಮೇಶ್‌ಕುಮಾರ್ ಕೋರಿದ್ದರು.

ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸದೆ ಖಾಸಗಿ ಆಸ್ಪತ್ರೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ಕೆಪಿಎಂಇ) ಕಾಯ್ದೆ ಉಲ್ಲಂಘಿಸುತ್ತಿವೆ ಎಂದು ಅವರು ದೂರಿದ್ದರು.

ಆಮ್ಲಜನಕ ಸಿಲಿಂಡರ್‌ಗಳನ್ನು ಇಸ್ರೊದಲ್ಲಿ ಶೇಖರಣೆ ಮಾಡಲು ಅವಕಾಶ ಮಾಡಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಎಚ್.ಕೆ.ಪಾಟೀಲ ಕೋರಿದ್ದರು. ಮನವಿ ಪರಿಗಣಿಸಲು ಪೀಠ ನಿರಾಕರಿಸಿದಾಗ ಅರ್ಜಿಯನ್ನು ಹಿಂಪಡೆಯಲಾಯಿತು.

ಕೋವಿಡ್‌ ವಿಷಯದಲ್ಲಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗಳ ಮೇಲೆ ಜಿಲ್ಲಾಡಳಿತ ಒತ್ತಡ ಹೇರುತ್ತಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರೂ ಆಗಿರುವ ಎಸ್.ಆರ್. ಪಾಟೀಲ ಆರೋಪಿಸಿದ್ದರು. ‘ಒಬ್ಬ ಶಾಸಕರಾಗಿ ಖಾಸಗಿ ಆಸ್ಪತ್ರೆಗಳ ಪರ ವಕಾಲತ್ತು ವಹಿಸಬಾರದು. ಆಸ್ಪತ್ರೆಗಳು ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಲು ಸೂಕ್ತ ವೇದಿಕೆಯನ್ನು ಹೊಂದಿವೆ’ ಎಂದು ಪೀಠ ಹೇಳಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು