ಬುಧವಾರ, ಮೇ 25, 2022
24 °C

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ‌.ಎಲ್.ಮಂಜುನಾಥ್ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಶನಿವಾರ ಮಧ್ಯರಾತ್ರಿ ನಿಧನರಾದರು.

"ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸಮೀಪದಲ್ಲಿನ ಅವರ ಸ್ವಗೃಹದಲ್ಲಿ ಶನಿವಾರ ರಾತ್ರಿ 12 ಗಂಟೆ ವೇಳೆಯಲ್ಲಿ ಹೃದಯಾಘಾತದಿಂದ ಹಠಾತ್ ಕೊನೆಯುಸಿರು ಎಳೆದರು" ಎಂದು ಅವರ ಕುಟುಂಬದ ಮೂಲಗಳು "ಪ್ರಜಾವಾಣಿ"ಗೆ ತಿಳಿಸಿವೆ.

ಅವರಿಗೆ 68 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

"ಭಾನುವಾರ (ಜ.23) ಮಧ್ಯಾಹ್ನ 3 ಗಂಟೆಗೆ ಕುಣಿಗಲ್ ರಸ್ತೆಯ ಕೆಂಪಲಿಂಗನಹಳ್ಳಿಯ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಪಾರ್ಥಿವ ಶರೀರವನ್ನು 12 ಗಂಟೆಯವೆರಗೂ ಕಾಮಾಕ್ಷಿಪಾಳ್ಯದ ನಿವಾಸದಲ್ಲಿ ಇರಿಸಲಾಗಿರುತ್ತದೆ" ಎಂದು ಮೂಲಗಳು ತಿಳಿಸಿವೆ.

1974ರ ಸೆಪ್ಟೆಂಬರ್ 13ರಂದು ಹೈಕೋರ್ಟ್ ನಲ್ಲಿ ವಕೀಲಿಕೆ ಆರಂಭಿಸಿದ್ದ ಮಂಜುನಾಥ್ ಅವರು 2000ದ ಡಿಸೆಂಬರ್ 11ರಂದು ಹೈಕೋರ್ಟ್ ನ್ಯಾಯಮೂರ್ತಿ ಯಾಗಿ ನೇಮಕಗೊಂಡಿದ್ದರು. 2015ರ ಏಪ್ರಿಲ್ 20ರಂದು ಹಿರಿಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ್ದರು.

ಹೈಕೋರ್ಟ್ ನ್ಯಾಯಮೂರ್ತಿಯಾಗಿ 14 ವರ್ಷ 4 ತಿಂಗಳ ಕಾಲ ವಿವಿಧ ಸ್ತರಗಳಲ್ಲಿ ದುಡಿದಿದ್ದ ಅವರು ವಿಭಾಗೀಯ ಪೀಠದ ನ್ಯಾಯಮೂರ್ತಿಯಾಗಿದ್ದಾಗಲೇ  ಸುಮಾರು 10 ಸಾವಿರ ತೀರ್ಪುಗಳನ್ನು ನೀಡಿದ್ದರು. ವಕೀಲರಾಗಿ, ನ್ಯಾಯಮೂರ್ತಿಯಾಗಿ ಅಪಾರ ಜನಪ್ರೀತಿ ಗಳಿಸಿದ್ದ ಅವರು ಹೈಕೋರ್ಟ್ ನಲ್ಲಿ ವಕೀಲರ ಗುಮಾಸ್ತರ ಸಂಘದ ಹುಟ್ಟಿಗೆ ಕಾರಣರಾಗಿದ್ದರು.

ನೊಂದ ನುಡಿ: "ಪಂಜಾಬ್‌- ಹರಿಯಾಣ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಬೇಕಿದ್ದ ನನಗೆ ಅನ್ಯಾಯ ಮಾಡಲಾಯಿತು" ಎಂದು ಸ್ವತಃ ಮಂಜುನಾಥ್ ತಮ್ಮ ನಿವೃತ್ತಿಯ ಬಳಿಕ ಬೆಂಗಳೂರು ವಕೀಲರ ಸಂಘದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನೀಡಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನೊಂದು ನುಡಿದಿದ್ದರು.

"ನನ್ನ ವಿರುದ್ಧ ಕೇರಳದ ಕ್ರೈಂ ಎಂಬ ಇಂಗ್ಲಿಷ್‌ ಪೀತ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆಸಲಾಯಿತು.  ಮಂಜುನಾಥ್‌ ಅಪಾರವಾದ ಅಕ್ರಮ ಆಸ್ತಿ ಗಳಿಸಿದ್ದಾರೆ. ಮಗಳ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ, ನಾನೊಬ್ಬ ದೊಡ್ಡ ಜಾತಿವಾದಿ ಎಂದೆಲ್ಲಾ ಆಪಾದಿಸಲಾಯಿತು. ಇಂತಹ ಆರೋಪಗಳನ್ನು ಮಾಡಿದವರು ಬೇರಾರೂ ಆಗಿರಲಿಲ್ಲ. ಅವರೂ ನನ್ನ ಸಹೋದರ ನ್ಯಾಯಮೂರ್ತಿಗಳೇ ಆಗಿದ್ದರು. ನನ್ನ ಏಳಿಗೆಗೆ ಕುತ್ತು ತರುವುದೇ ಅವರ ಏಕೈಕ ಉದ್ದೇಶವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು