ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ದಾಸ್ತಾನಿನ ಮಾಹಿತಿ ಆಘಾತಕಾರಿ: ಹೈಕೋರ್ಟ್‌ ಕಳವಳ

ಮೂರು ದಿನಗಳೊಳಗೆ ಕ್ರಮಕ್ಕೆ ಕೇಂದ್ರಕ್ಕೆ ನಿರ್ದೇಶನ
Last Updated 6 ಮೇ 2021, 17:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಕೊರತೆ ಕುರಿತು ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ನಾಗರಿಕರು ಮೊದಲ ಡೋಸ್‌ ಲಸಿಕೆ ಕೂಡ ಪಡೆಯುವ ಸ್ಥಿತಿ ಇಲ್ಲ. ಆರೋಗ್ಯ ಕ್ಷೇತ್ರದ ಸಿಬ್ಬಂದಿ ಮತ್ತು ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿ ಮುಂಚೂಣಿಯಲ್ಲಿರುವವರಿಗೆ ಮಾತ್ರವೇ ಲಸಿಕೆ ಲಭಿಸಬಹುದು ಎಂದು ಹೇಳಿದೆ.

ಲಸಿಕೆ ದಾಸ್ತಾನಿನ ಮಾಹಿತಿ ಆಘಾತಕಾರಿಯಾಗಿದೆ ಎಂದಿರುವ ನ್ಯಾಯಾಲಯ, ಕೋವಿಡ್‌ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆ ಪಟ್ಟಿ, ಮನವಿಗಳನ್ನು ಸಮಗ್ರ ವಿವರಗಳೊಂದಿಗೆ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯಕ್ಕೆ ಅಗತ್ಯ ಪ್ರಮಾಣದ ಕೋವಿಡ್‌ ಲಸಿಕೆ ಪೂರೈಸುವ ಕುರಿತು ಮೂರು ದಿನಗಳೊಳಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆಯೂ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೋವಿಡ್‌ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯದಲ್ಲಿ ಬಳಕೆಯಾಗಿರುವ ಲಸಿಕೆಗಳಿಗೆ ಸಂಬಂಧಿಸಿದ ಅಂಕಿಅಂಶಗಳ ವಿವರಗಳನ್ನು ಪರಿಶೀಲಿಸಿತು. ‘ರಾಜ್ಯಕ್ಕೆ 1,08,49,470 ಡೋಸ್‌ ಕೋವಿಡ್‌ ಲಸಿಕೆ ಪೂರೈಕೆಯಾಗಿದೆ. ಈವರೆಗೆ 83,28,241 ಜನರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಹಾಕಲಾಗಿದೆ. 17,44,554 ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. ಸದ್ಯ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಡೋಸ್‌ ಮಾತ್ರ ದಾಸ್ತಾನು ಇದೆ’ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿತು.

ಮೇ 1ರಿಂದ ರಾಜ್ಯಕ್ಕೆ ಅಗತ್ಯವಿರುವ ಲಸಿಕೆಯ ಪ್ರಮಾಣದ ಶೇಕಡ 50ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಪೂರೈಸುತ್ತಿದೆ. ಉಳಿದ ಶೇ 50ರಷ್ಟು ಲಸಿಕೆಯನ್ನು ಉತ್ಪಾದಕರಿಂದಲೇ ರಾಜ್ಯ ಸರ್ಕಾರ ಖರೀದಿಸುತ್ತಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರದ ಪರ ವಕೀಲರು ವಿಭಾಗೀಯ ಪೀಠಕ್ಕೆ ನೀಡಿದರು.

‘ದಾಸ್ತಾನಿನ ಪ್ರಮಾಣವನ್ನು ಗಮನಿಸಿದರೆ, ರಾಜ್ಯದ ಸಾಮಾನ್ಯ ನಾಗರಿಕರು ಮೊದಲ ಡೋಸ್‌ ಲಸಿಕೆ ಪಡೆಯುವುದೂ ಕಷ್ಟವಿದೆ. ಆರೋಗ್ಯ ಸಿಬ್ಬಂದಿ ಮತ್ತು ಕೋವಿಡ್‌ ನಿಯಂತ್ರಣ ಕೆಲಸಗಳಲ್ಲಿ ಮುಂಚೂಣಿಯಲ್ಲಿರುವವರಿಗೆ ನೀಡಲು ಮಾತ್ರ ದಾಸ್ತಾನು ಸಾಕಾಗಬಹುದು’ ಎಂದು ನ್ಯಾಯಪೀಠ ಹೇಳಿತು.

‘ರಾಜ್ಯ ಸರ್ಕಾರ ಕೋವಿಡ್‌ ಲಸಿಕೆ ಖರೀದಿಗಾಗಿ ಉತ್ಪಾದಕರಿಗೆ ಬೇಡಿಕೆ ಸಲ್ಲಿಸಿದೆ. ಈಗ ತಕ್ಷಣವೇ ಅಗತ್ಯವಿರುವ ಪ್ರಮಾಣದ ಲಸಿಕೆಯನ್ನು ಪೂರೈಸುವಂತೆ ಕೇಂದ್ರ ಸರ್ಕಾರದ ಸಂಬಂಧಿಸಿದ ಪ್ರಾಧಿಕಾರಕ್ಕೆ ಬೇಡಿಕೆ ಪಟ್ಟಿಯನ್ನು ಸಲ್ಲಿಸಬೇಕು’ ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

18ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕಾಗಿ ಎರಡು ಕೋಟಿ ಡೋಸ್‌ ಕೋವಿಶೀಲ್ಡ್‌ ಮತ್ತು ಒಂದು ಕೋಟಿ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆಗೆ ಉತ್ಪಾದಕರಿಗೆ ಬೇಡಿಕೆ ಸಲ್ಲಿಸಲಾಗಿದೆ. ಈವರೆಗೆ ಮೂರು ಲಕ್ಷ ಡೋಸ್‌ಗಳಷ್ಟು ಪೂರೈಕೆಯಾಗಿದೆ ಎಂದು ರಾಜ್ಯ ಸರ್ಕಾರ ನ್ಯಾಯಪೀಠಕ್ಕೆ ತಿಳಿಸಿತು.

‘18ರಿಂದ 44 ವರ್ಷ ವಯಸ್ಸಿನವರಿಗೆ ಅಗತ್ಯವಿರುವ ಲಸಿಕೆಯನ್ನು ಪೂರೈಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಲಸಿಕೆ ಉತ್ಪಾದಕರ ಜತೆ ವ್ಯವಹರಿಸಬೇಕಾದ ಅಗತ್ಯವಿದೆ’ ಎಂದು ನ್ಯಾಯಾಲಯ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT