ಭಾನುವಾರ, ಮಾರ್ಚ್ 7, 2021
29 °C

ಗಣಿ ಅಕ್ರಮ: ಜನಾರ್ದನ ರೆಡ್ಡಿ ಪತ್ನಿ ಅರುಣಾ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರನ್ನು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೈಬಿಟ್ಟು ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಜನಾರ್ದನ ರೆಡ್ಡಿ ಮತ್ತು ಲಕ್ಷ್ಮಿ ಅರುಣಾ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪನಿಗೆ(ಎಎಂಸಿ) ಪಾಲುದಾರರಾಗಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆರೋಪಗಳಿಂದ ಬಿಡುಗಡೆ ಕೋರಿ ಲಕ್ಷ್ಮಿ ಅರುಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿ ದಾಖಲಿಸಿದ್ದ ಸಾಕ್ಷ್ಯಗಳಲ್ಲಿ ಯಾರೊಬ್ಬರು ಲಕ್ಷ್ಮಿ ಅವರ ವಿರುದ್ಧ ಆರೋಪ ಹೊರಿಸದಿರುವುದನ್ನು ಗಮನಿಸಿದ ನ್ಯಾಯಾಲಯ, ಅವರನ್ನು ಆರೋಪದಿಂದ ಕೈಬಿಟ್ಟು 2015ರಲ್ಲಿ ಆದೇಶ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ಸಮಾಜ ಪರಿವರ್ತನ ಸಮುದಾಯ (ಎಸ್‌ಪಿಎಸ್)ದ ಎಸ್.ಆರ್. ಹಿರೇಮಠ ಅವರು ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಅರ್ಜಿ ದಾಖಲಿಸಿದ್ದರು. ‘ಮುಖ್ಯ ಆರೋಪಿ ಜನಾರ್ದನ ರೆಡ್ಡಿ ಅವರಷ್ಟೇ ಜವಾಬ್ದಾರಿಯನ್ನು ಇತರ ಪಾಲುದಾರರು ಹೊಂದಿದ್ದಾರೆ. ಮೀಸಲು ಅರಣ್ಯದಿಂದ ಅಕ್ರಮವಾಗಿ ಅದಿರು ಸಾಗಿಸುವ ಕೃತ್ಯದಲ್ಲಿ ಲಕ್ಷ್ಮಿ ಅರುಣಾ ಅವರೂ ಭಾಗಿದಾರರು’  ಎಂದು ಆರೋಪಿಸಿದ್ದರು.   

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರು, ‘ಲಕ್ಷ್ಮಿ ಅರುಣಾ ವಿರುದ್ಧ ನಿರ್ದಿಷ್ಟ ದಾಖಲೆ ಅಥವಾ ಸಾಕ್ಷ್ಯ ಇಲ್ಲ. ಹೆಸರಿಗಷ್ಟೇ ಅವರು ಪಾಲುದಾರರು. ಪತಿ ಜನಾರ್ದನ ರೆಡ್ಡಿ ಸೂಚನೆ ಮೇರೆಗೆ ದಾಖಲೆಗಳಿಗೆ ಸಹಿ ಹಾಕುತ್ತಿದ್ದರು ಎಂಬುದು ತಿಳಿದ ಬಳಿಕ ನ್ಯಾಯಾಲಯ ಅವರನ್ನು ಆರೋಪದಿಂದ ಕೈಬಿಟ್ಟಿದೆ’ ಎಂದು ಅಭಿಪ್ರಾಯಪಟ್ಟರು. 

‘ಇದೇ ಪ್ರಕರಣ ಮತ್ತೊಬ್ಬ ಆರೋಪಿ ಐಎಎಸ್ ಅಧಿಕಾರಿ ಶಿವಲಿಂಗಮೂರ್ತಿ ಅವರನ್ನು ಆರೋಪದಿಂದ ಕೈಬಿಟ್ಟಿದ್ದ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಬದಿಗಿರಿಸಿದೆ. ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡ 2020ರ ಜನವರಿಯಲ್ಲಿ ಎತ್ತಿ ಹಿಡಿದಿದ್ದು, ವಿಚಾರಣೆ ಎದುರಿಸಲು ಶಿವಲಿಂಗಮೂರ್ತಿ ಅವರಿಗೆ ನಿರ್ದೇಶನ ನೀಡಿದೆ. ಅವರು ಮತ್ತು ಇತರ ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ’ ಎಂದೂ ಅರ್ಜಿದಾರರು ವಾದಿಸಿದರು.

2011ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ, ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ₹480 ಕೋಟಿ ನಷ್ಟವಾಗಿದೆ ಎಂದು ತಿಳಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು