ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸದಸ್ಯರ ಧರಣಿ; ವಿಧಾನ ಪರಿಷತ್ ಕಲಾಪ‌ ಅನಿರ್ದಿಷ್ಟಾವಧಿ ಮುಂದೂಡಿಕೆ

ಅಹೋರಾತ್ರಿ ಧರಣಿಗೆ ಮುಂದಾಗಿದ್ದ ಕಾಂಗ್ರೆಸ್‌; ಸುಳಿವರಿತ ಸರ್ಕಾರದಿಂದ ಎಚ್ಚರಿಕೆ ಹೆಜ್ಜೆ: ಅಧಿವೇಶನ 5 ದಿನ ಮೊಟಕು
Last Updated 24 ಮಾರ್ಚ್ 2021, 16:55 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಆರು ಮಂದಿ ಹಾಲಿ ಸಚಿವರ ಸಿ.ಡಿ ವಿಚಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬುಧವಾರ ಕೋಲಾಹಲಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಬಜೆಟ್‌ ಅಧಿವೇಶನ ಐದು ದಿನ ಮುಂಚಿತವಾಗಿಯೇ ಅಂತ್ಯಗೊಂಡಿತು.

ಪೂರ್ವ ನಿಗದಿಯಂತೆ ಇದೇ 31ರವರೆಗೆ ಅಧಿವೇಶನ ನಡೆಯಬೇಕಿತ್ತು. ಏತನ್ಮಧ್ಯೆ ಕಲಾಪ ಸಲಹಾ ಸಮಿತಿ(ಬಿಎಸಿ) ಸಭೆ ನಡೆಸಿದ್ದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾ.25ಕ್ಕೆ ಮುಖ್ಯಮಂತ್ರಿ ಉತ್ತರ ನೀಡಲಿದ್ದು, 26ಕ್ಕೆ ಬಜೆಟ್ ಅಧಿವೇಶನ ಮುಗಿಸುವ ಬಗ್ಗೆ ಚರ್ಚೆ ನಡೆದಿದೆ. ಮತ್ತೊಮ್ಮೆ ಬಿಎಸಿ ಸಭೆ ಸೇರಿ, ಒಂದು ದೇಶ ಒಂದು ಚುನಾವಣೆ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸದನದಲ್ಲಿ ಪ್ರಕಟಿಸಿದ್ದರು. ಬಿಎಸಿಯಿಂದ ದೂರ ಉಳಿಯಲು ಕಾಂಗ್ರೆಸ್‌ ನಿರ್ಧರಿಸಿದ್ದರಿಂದ ಸಭೆ ನಡೆದಿರಲಿಲ್ಲ. ಹೀಗಾಗಿ 26ವರೆಗಾದರೂ ಕಲಪಾ ನಡೆಯಬೇಕಿತ್ತು.

ಆದರೆ, ಬುಧವಾರ ಉಭಯ ಸದನಗಳಲ್ಲೂ ಸಿ.ಡಿ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸದಸ್ಯರು, ಅಹೋರಾತ್ರಿ ಧರಣಿಗೆ ಮುಂದಾಗಿದ್ದರು.

ಗದ್ದಲದ ನಡುವೆ ಕಲಾಪ: ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಗದ್ದಲದ ಮಧ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಬಳಿಕ ಧನವಿನಿಯೋಗ ಮಸೂದೆ, ಪೂರಕ ಅಂದಾಜಿನ ಮೂರನೇ ಕಂತು, ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ಮಸೂದೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ (ತಿದ್ದುಪಡಿ) ಮಸೂದೆಗೆ ಅಂಗೀಕಾರ ನೀಡಿ ಕಲಾಪವನ್ನು ಮುಂದೂಡಲಾಯಿತು.

ಕಲಾಪದುದ್ದಕ್ಕೂ ಕಾಂಗ್ರೆಸ್‌– ಬಿಜೆಪಿ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು. ಸಿ.ಡಿ ವಿಚಾರದಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆ ತಂದಿರುವ ಆರು ಸಚಿವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದ ಕಾಂಗ್ರೆಸ್‌ ಸದಸ್ಯರು, ‘ಇದು ಲಂಚ ಮಂಚದ ಸರ್ಕಾರ’, ‘ಬ್ಲೂ ಬಾಯ್ಸ್‌ಗೆ ಧಿಕ್ಕಾರ– ಬೇಡ ಬೇಡ ಬಾಂಬೆ ಮಿಠಾಯಿ ಬೇಡ‌’ ಎಂಬ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಕೂಡ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿನಡೆಸಿದರು.

ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ‘ಯಾವ ಶಾಸಕರೂ ಏಕಪತ್ನಿ ವ್ರತಸ್ಥರಲ್ಲ’ ಎಂಬರ್ಥದಲ್ಲಿ ಸಚಿವ ಡಾ.ಕೆ. ಸುಧಾಕರ್‌ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳ ಸದಸ್ಯರು, ಎಲ್ಲರ ಬಗ್ಗೆಯೂ ತನಿಖೆಗೆ ಆಗ್ರಹಿಸಿದರು. ಗದ್ದಲ ಜೋರಾಗುತ್ತಿದ್ದಂತೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

ಪರಿಷತ್‌ನಲ್ಲೂ ಕೋಲಾಹಲ

ವಿಧಾನ ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಿ.ಡಿ ವಿಚಾರ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಧರಣಿ ಆರಂಭಿಸಿದರು. ನಡುವೆಯೇ ಮುಖ್ಯಮಂತ್ರಿ ಬಜೆಟ್‌ ಮೇಲಿನ ಚರ್ಚೆಗೆ ಲಿಖಿತ ಉತ್ತರ ಮಂಡಿಸಿದರು. ಧನವಿನಿಯೋಗ ಮಸೂದೆಗೂ ಒಪ್ಪಿಗೆ ಪಡೆದರು.

ಗದ್ದಲ ಜೋರಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಹತ್ತು ನಿಮಿಷ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾದಾಗಲೂ ಕಾಂಗ್ರೆಸ್‌ ಧರಣಿ ಮುಂದುವರಿಸಿತು. ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ದೊರಕುತ್ತಿಲ್ಲ ಎಂದು ಆಕ್ಷೇಪಿಸಿ ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು. ಗದ್ದಲ ಹೆಚ್ಚಾದ ಕಾರಣ ಮತ್ತೆ ಕಲಾಪ ಮುಂದೂಡಲಾಯಿತು.

ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗಲೂ ವಾಕ್ಸಮರ ಮುಂದುವರೆಯಿತು. ಸಿ.ಡಿ ಪ್ರಕರಣ ಕುರಿತು ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಅವರಿಗೆ ಮಾತನಾಡಲು ಸಭಾಪತಿ ಅವಕಾಶ ಕಲ್ಪಿಸಿದರು. ಅವರ ತೀಕ್ಷ್ಣ ಮಾತುಗಳಿಗೆ ಬಿಜೆಪಿ ಸದಸ್ಯರು ಪ್ರತ್ಯುತ್ತರ ನೀಡಲಾರಂಭಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆಯೇ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಗದ ಪತ್ರಗಳನ್ನು ಮಂಡಿಸಿದರು. ಬಳಿಕ ಸಭಾಪತಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT