ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಮೇಳ ಸಂಪನ್ನ: ಆನ್‌ಲೈನ್‌ನಲ್ಲಿ 16 ಲಕ್ಷ ಮಂದಿ ಭಾಗಿ

ಮೇಳಕ್ಕೆ ಭೌತಿಕ ಹಾಗೂ ಆನ್‌ಲೈನ್‌ ಮೂಲಕ ಭಾಗವಹಿಸಿದ ರೈತರು
Last Updated 12 ಫೆಬ್ರುವರಿ 2021, 19:17 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟದಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಆವರಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ ಶುಕ್ರವಾರ ಸಂಪನ್ನಗೊಂಡಿತು.

‘ಕೋವಿಡ್ ಕಾರಣದಿಂದ ಆನ್‌ಲೈನ್ ಹಾಗೂ ಭೌತಿಕವಾಗಿ ಮೇಳ ಆಯೋಜಿಸಲಾಗಿತ್ತು. ದೇಶದ ವಿವಿಧೆಡೆಯಿಂದ ಒಟ್ಟು16.3 ಲಕ್ಷ ಮಂದಿ ಆನ್‌ಲೈನ್‌ ಮೂಲಕ ಹಾಗೂ 70 ಸಾವಿರ ಮಂದಿ ಭೌತಿಕವಾಗಿ ಮೇಳದಲ್ಲಿ ಭಾಗವಹಿಸಿದರು’ ಎಂದು ಐಐಎಚ್ಆರ್ ನಿರ್ದೇಶಕ ಎಂ.ಆರ್.ದಿನೇಶ್ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.

‘ಕೋವಿಡ್ ಕಾರಣದಿಂದ ಆನ್‌ಲೈನ್‌ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೆವು. ವೆಬ್‌ಸೈಟ್‌, ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ನೇರಪ್ರಸಾರವೂ ಇತ್ತು. ಬೇರೆ ರಾಜ್ಯಗಳ ರೈತರು ಸ್ಥಳೀಯ ರೈತ ಸಂಸ್ಥೆಗಳ ಸಹಾಯದಿಂದ ಅಲ್ಲಿಂದಲೇ ಮೇಳ ವೀಕ್ಷಿಸಿದರು. ಅವರ ಸಮಸ್ಯೆಗಳನ್ನು ತಮ್ಮದೇ ಭಾಷೆಯಲ್ಲಿ ಪರಿಹರಿಸಲು ವಿಜ್ಞಾನಿಗಳಿಂದ ಸಂವಾದ, ಕಾರ್ಯಾಗಾರ ಹಾಗೂ ಗೋಷ್ಠಿಗಳನ್ನು ಮೇಳದ ಐದೂ ದಿನ ನಡೆಸಿದೆವು. ಇದರಿಂದ ದೇಶವ್ಯಾಪಿ ರೈತರನ್ನು ಮೇಳ ತಲುಪಲು ಸಾಧ್ಯವಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.

ಐಐಎಚ್‌ಆರ್‌ನ ಪ್ರಧಾನ ವಿಜ್ಞಾನಿ ಎಂ.ವಿ.ಧನಂಜಯ್,‘ಮೇಳದಲ್ಲಿ ಒಟ್ಟು 7 ತಂತ್ರಜ್ಞಾನಗಳ ವಿನಿಯಮ ಮತ್ತು ಪರವಾನಗಿ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ನಗರ ಮತ್ತು ಪಟ್ಟಣಗಳ ಜನರಿಗೆ ಐದು ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು’ ಎಂದರು.

ಭಾರತೀಯ ಕೃಷಿ ಸಂಶೋಧನೆ ಪರಿಷತ್‌ನ ಉಪ ಮಹಾನಿರ್ದೇಶಕ ವಿಕ್ರಮಾದಿತ್ಯ ಪಾಂಡೆ,‘ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರ ಮನವೊಲಿಸಬೇಕು. ಐಐಎಚ್‌ಆರ್‌ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು, ತಳಿಗಳು ಎಲ್ಲ ರೈತರಿಗೆ ತಲುಪಬೇಕು’ ಎಂದು ಹೇಳಿದರು.

ಬಿಡಿಎ ಅಧ್ಯಕ್ಷ ಎಸ್‌.ಆರ್.ವಿಶ್ವನಾಥ್, ‘ರೈತನಿಗೆ ಸೂಕ್ತ ಬೆಲೆ ಸಿಗದೆ, ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗಬೇಕು. ಮುಂದಿನ ವರ್ಷದ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲುಪ್ರಧಾನಿ ಮೋದಿ ಅವರು ಎಲ್ಲ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲ ಬೆಳೆಗಳಿಗೆ ಅಗತ್ಯ ಬೆಂಬಲ ಬೆಲೆ ನಿಗದಿ ಮಾಡಬೇಕು’ ಎಂದರು.

ಸಂಸ್ಥೆಯ ತಂತ್ರಜ್ಞಾನಗಳನ್ನು ಬಳಸಿರುವ ಪ್ರಗತಿಪರ ರೈತರು ಹಾಗೂ ಉದ್ಯಮಿಗಳನ್ನುಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆರ್.ರಾಜೇಂದ್ರ ಪ್ರಸಾದ್, ಬೆಂಗಳೂರಿನ ಕೆವಿಕೆಗಳ ಅಟಾರಿ ನಿರ್ದೇಶಕ ವಿ.ವೆಂಕಟಸುಬ್ರಹ್ಮಣ್ಯನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT