ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ: ವನ್ಯಜೀವಿಗಳ ಮೇಲೆ ಪರಿಣಾಮ ಸಮೀಕ್ಷೆಗೆ ಸೂಚನೆ

Last Updated 1 ಡಿಸೆಂಬರ್ 2021, 16:45 IST
ಅಕ್ಷರ ಗಾತ್ರ

ಬೆಂಗಳೂರು: ‘ಹುಬ್ಬಳ್ಳಿ‌–ಅಂಕೋಲಾ ಮಧ್ಯದ ಬ್ರಾಡ್‌ಗೇಜ್‌ ರೈಲು ಮಾರ್ಗ ಯೋಜನೆಯಿಂದ ವನ್ಯಜೀವಿ ಸಂಪತ್ತಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಿ’ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ‘ಪ್ರಾಜೆಕ್ಟ್ ವೃಕ್ಷ ಫೌಂಡೇಷನ್’ ಮತ್ತು ಗಿರಿಧರ್ ಕುಲಕರ್ಣಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ಉದ್ದೇಶಿತ ರೈಲ್ವೆ ಯೋಜನೆಯಿಂದ ಪಶ್ಚಿಮ ಘಟ್ಟಗಳ ಅಪರೂಪದ ವನ್ಯಜೀವಿ ಸಂಪತ್ತಿಗೆ ತೊಂದರೆ ಉಂಟಾಗಲಿದೆ ಎಂಬ ಆತಂಕಗಳ ಹಿನ್ನೆಲೆಯಲ್ಲಿ, ಯೋಜನೆಯ ಸಾಧಕ-ಬಾಧಕಗಳ ಬಗ್ಗೆರಾಷ್ಟ್ರೀಯ ವನ್ಯಜೀವಿ ಮಂಡಳಿ ಮೌಲ್ಯಮಾಪನ ನಡೆಸಬೇಕು. ಈಗಾಗಲೇ ಲಭ್ಯವಿರುವ ಸಮೀಕ್ಷೆ ಹಾಗೂ ವರದಿಗಳನ್ನು ಪರಿಶೀಲಿಸಬೇಕು. ಅಗತ್ಯಬಿದ್ದರೆ ತಜ್ಞರ ನೆರವು ಪಡೆದುಕೊಳ್ಳಬಹುದು’ ಎಂದು ನ್ಯಾಯಪೀಠ ಹೇಳಿದೆ.

‘ಅಭಿವೃದ್ಧಿ ಕಾರ್ಯಗಳು ನಡೆಯಬೇಕು, ಆದರೆ, ಅದರಿಂದ ವನ್ಯಜೀವಿ ಸಂಪತ್ತಿಗೆ ತೊಂದರೆ ಆಗಬಾರದು‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ‘ಮಂಡಳಿ ಈ ಬಗ್ಗೆ ಸಮೀಕ್ಷೆ ನಡೆಸಿ, ಮುಂದಿನ ವಿಚಾರಣೆ ಒಳಗೆ ವರದಿ ಸಲ್ಲಿಸಬೇಕು‘ ಎಂದು ನ್ಯಾಯಪೀಠ ಆದೇಶಿಸಿದೆ.

ಹುಬ್ಬಳ್ಳಿ-ಅಂಕೋಲಾ ಮಧ್ಯದ 164.44 ಕಿ.ಮಿ ಉದ್ದನೆಯ ರೈಲು ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್‌ 20ರಂದು ಅನುಮತಿ ನೀಡಿರುವುದನ್ನು ಆಕ್ಷೇಪಿಸಿ ಪಿಐಎಲ್‌ ಸಲ್ಲಿಸಲಾಗಿದೆ.

‘ರಾಜ್ಯ ವನ್ಯಜೀವಿ ಮಂಡಳಿ ಕೈಗೊಂಡಿರುವ ನಿರ್ಣಯ ಆಧರಿಸಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಸಂಬಂಧ ಮುಂದಿನ ಕ್ರಮ ಜರುಗಿಸಬಾರದು’ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿ ಹೈಕೋರ್ಟ್‌ ಜೂನ್‌ 18ರಂದು ಮಧ್ಯಂತರ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT