ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್ ಕುಮಾರ್ ವ್ಯಂಗ್ಯ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ l ಕಾಂಗ್ರೆಸ್‌, ಜೆಡಿಎಸ್‌ ಪ್ರಮುಖರು ಬಿಜೆಪಿಗೆ?
Last Updated 21 ಅಕ್ಟೋಬರ್ 2020, 21:10 IST
ಅಕ್ಷರ ಗಾತ್ರ

ಬೆಂಗಳೂರು: ಶಿರಾ ಮತ್ತು ಆರ್‌.ಆರ್‌.ನಗರ ಉಪಚುನಾವಣೆಗಳು ಮುಗಿದ ಬಳಿಕ ಕನಕಪುರ ‘ಬಂಡೆ’ ಛಿದ್ರವಾಗುತ್ತದೆ, ‘ಹುಲಿಯಾ’ ಕಾಡಿಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ಲೇವಡಿ ಮಾಡಿದರು.

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಕಾರ್ಪೊರೇಟರ್‌ಗಳ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉಪಚುನಾವಣೆ ಬಳಿಕ ತೆರೆಮರೆಗೆ ಸರಿಯುತ್ತಾರೆ. ಇವರಿಬ್ಬರ ಮಧ್ಯೆ ತಾಳಮೇಳವಿಲ್ಲದೆ ಕಾಂಗ್ರೆಸ್‌ ದಿಕ್ಕೆಟ್ಟು ಹೋಗಿದೆ ಎಂದರು.

ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ತಳಮಳ ಶುರುವಾಗಿದೆ. ಮುಂಬರುವ ದಿನಗಳಲ್ಲಿ ಈ ಎರಡೂ ಪಕ್ಷಗಳ ಪ್ರಮುಖ ನಾಯಕರು ಬಿಜೆಪಿ ಸೇರಲಿದ್ದು, ಈಗಾಗಲೇ ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಗೆ ಬಹುಮತ ಇದ್ದಾಗ ಅಭಿವೃದ್ಧಿ ಮಾಡಲಿಲ್ಲ. ಕೇವಲ ಜಾತಿ ರಾಜಕಾರಣ ಮಾಡಿದರು. ಒಂದು ಕಡೆ ಟಿಪ್ಪು ಜಯಂತಿ ಮೂಲಕ ಸಮಾಜ ಒಡೆಯುವ ಪ್ರಯತ್ನ ಮಾಡಿದರೆ, ಇನ್ನೊಂದು ಕಡೆ ವೀರಶೈವ–ಲಿಂಗಾಯತ ಸಮಾಜವನ್ನೂ ಒಡೆಯುವ ಕೆಲಸಮಾಡಿದರು. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ತೊಂದರೆ ನೀಡಿದರು ಎಂದು ಕಟೀಲ್‌ ಹೇಳಿದರು.

ಜೆಡಿಎಸ್‌ನವರು ಅಧಿಕಾರಕ್ಕಾಗಿ ಇನ್ನೊಂದು ಪಕ್ಷದ ಜತೆ ‘ಪ್ರೇಮ ವಿವಾಹ’ ಆಗುತ್ತಾರೆ. ಆ ಬಳಿಕ ಬೈದಾಡಿ
ಕೊಳ್ಳುತ್ತಾರೆ. ಅಪ್ಪ ಒಂದು ಪಕ್ಷದ ಪರ ಮಾತನಾಡಿದರೆ, ಮಗ ಇನ್ನೊಂದು ಪಕ್ಷದ ಪರ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಒಂದೇ ಪಕ್ಷದಲ್ಲಿ ಮುನಿರತ್ನ–ಮಂಜುಳಾ

ಬಿಬಿಎಂಪಿಯ ಮಾಜಿ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಬುಧವಾರ ಬಿಜೆಪಿಗೆ ಸೇರ್ಪಡೆಯಾದರು. ಈ ಹಿಂದೆ ಪಾಲಿಕೆಯಲ್ಲಿ ಮುನಿರತ್ನ ಮತ್ತು ಮಂಜುಳಾ ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿಕೊಂಡಿದ್ದರು. ಈಗ ಬಿಜೆಪಿ ಸೇರುವ ಮೂಲಕ ಇಬ್ಬರೂ ಒಂದೇ ಪಕ್ಷ ಸೇರಿಕೊಂಡಂತಾಗಿದೆ. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ, ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಮುಂತಾದವರು ಭಾಗವಹಿಸಿದ್ದರು. ಕಾಂಗ್ರೆಸ್, ಜೆಡಿಎಸ್ ಮಾಜಿ ಕಾರ್ಪೋರೇಟರ್‌ಗಳಾದ ರಾಮಚಂದ್ರ, ಚಂದ್ರಪ್ಪರೆಡ್ಡಿ, ದೇವದಾಸ್, ಲಕ್ಷ್ಮಿನಾರಾಯಣ ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT