ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಶ್ರೀಲಂಕಾದ 38 ಜನರ ಬಂಧನ

ತಮಿಳುನಾಡಿನ ಮೂಲಕ ಮಂಗಳೂರಿಗೆ ಬಂದು ವಾಸ್ತವ್ಯ
Last Updated 11 ಜೂನ್ 2021, 22:13 IST
ಅಕ್ಷರ ಗಾತ್ರ

ಮಂಗಳೂರು: ತಮಿಳುನಾಡಿನ ಮೂಲಕ ಮಂಗಳೂರಿಗೆ ಬಂದು ಅಕ್ರಮವಾಗಿ ವಾಸವಾಗಿದ್ದ ಶ್ರೀಲಂಕಾದ 38 ಜನರನ್ನು ಹಾಗೂ ನಗರದಲ್ಲಿ ಅವರಿಗೆ ಆಶ್ರಯ ನೀಡಿದ್ದ ಆರು ಮಂದಿ ಸ್ಥಳೀಯರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಲಂಕಾದ ಏಜೆಂಟರು ಕೆನಡಾದಲ್ಲಿ ಉದ್ಯೋಗದ ಒದಗಿಸುವುದಾಗಿ ಹೇಳಿ ₹6 ರಿಂದ 10 ಲಕ್ಷ ಪಡೆದಿದ್ದು, ಈ ವ್ಯಕ್ತಿಗಳನ್ನು ಖಾಸಗಿ ಬೋಟ್ ಮೂಲಕ ಮಾರ್ಚ್ 17ರಂದು ತಮಿಳುನಾಡಿನ ತೂತುಕುಡಿಗೆ ಕರೆತರಲಾಗಿತ್ತು. ಅಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಆರಂಭವಾಗಿದ್ದರಿಂದ ಇವರನ್ನು ಬಸ್‌ನಲ್ಲಿ ಬೆಂಗಳೂರಿಗೆ ಕಳುಹಿಸಿ, ಅಲ್ಲಿಂದ ಮಂಗಳೂರಿಗೆ ಸಾಗಿಸಲಾಗಿತ್ತು.

ಈ ವ್ಯಕ್ತಿಗಳು ಮಂಗಳೂರಿನಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ವಾಸವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಸೂಚನೆಯಂತೆ ಸತತ 78 ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದೆ. ನಗರ ಬಂದರಿನ ಅಝೀಝುದ್ದೀನ್ ರಸ್ತೆಯ ಸೀ ಪೋರ್ಟ್, ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಸಿಟಿ ಲಾಡ್ಜ್‌ ಹಾಗೂ ಕಸಬಾ ಬೆಂಗ್ರೆಯ ಮನೆಯಲ್ಲಿ ನೆಲೆಸಿದ್ದ 38 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

‘ಇದು ಮಾನವ ಕಳ್ಳ ಸಾಗಾಟದ ಗಂಭೀರ ಪ್ರಕರಣವಾಗಿದೆ. ವಿದೇಶಿ ಪ್ರಜೆಗಳ ಅಕ್ರಮ ಪ್ರವೇಶ ಹಾಗೂ ವಾಸದ ಅಪರಾಧವೂ ಇದಾಗಿದೆ. ವಶಕ್ಕೆ ಪಡೆದವರು ಉತ್ತರ ಶ್ರೀಲಂಕಾ ಭಾಗದ ನಿವಾಸಿಗಳೆಂದು ಹೇಳಲಾಗಿದ್ದು, ಇವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಇವರ ಕೆಲವು ಸ್ನೇಹಿತರೂ ಈ ಹಿಂದೆಯೇ ಕೆಲಸಕ್ಕಾಗಿ ಕೆನಡಾಕ್ಕೆ ಹೋಗಿದ್ದಾಗಿ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ಇವರಿಗೆ ಸಹಕರಿಸಿದವರು, ಮಂಗಳೂರು, ಬೆಂಗಳೂರಿನಲ್ಲೂ ಮಾನವ ಕಳ್ಳ ಸಾಗಾಟಕ್ಕೆ ಏಜೆಂಟರು ಕಾರ್ಯ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎನ್‌. ಶಶಿಕುಮಾರ್‌ ತಿಳಿಸಿದರು.

ವಶಕ್ಕೆ ಪಡೆದಿರುವ 38 ಮಂದಿಯನ್ನು ಕೋವಿಡ್ ತಪಾಸಣೆಗೊಳಪಡಿಸಿ, ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT