ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿಗೆ ಅಳವಡಿಸುವುದು ಅಗತ್ಯ: ಬೊಮ್ಮಾಯಿ

Last Updated 6 ಆಗಸ್ಟ್ 2021, 7:26 IST
ಅಕ್ಷರ ಗಾತ್ರ

ಬೆಂಗಳೂರು: ಮಾನವೀಯ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳವಡಿಸುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುವುದಲ್ಲದೆ, ನ್ಯಾಯಾಂಗ ಇನ್ನಷ್ಟು ಮಾನವೀಯ ಹಾಗೂ ಜನಸ್ನೇಹಿಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠವು ಏರ್ಪಡಿಸಿದ್ದ 'ಕರ್ನಾಟಕದಲ್ಲಿ ಮಿತಾಕ್ಷರ, ವಚನ ದಾಸ ಮತ್ತು ಜಾನಪದ ಸಾಹಿತ್ಯದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು- ಒಂದು ಪರಿಶೋಧನೆ' ಎಂಬ ವಿಷಯದ ಕುರಿತ ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ವಚನ, ದಾಸ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯಗಳು ಸಮಾನತೆ, ಸಹಿಷ್ಣುತೆ, ಧನ್ಯತೆ, ಕ್ಷಮಾಗುಣ ಮೊದಲಾದ ಭಾವಗಳನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಿವೆ, ಈ ಮೌಲ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಳವಡಿಸುವ ನಿಟ್ಟಿನಲ್ಲಿ ವಿಜ್ಞಾನೇಶ್ವರ ಅಧ್ಯಯನ ಪೀಠ ಕಾರ್ಯನಿರ್ವಹಿಸಬೇಕಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಾಜದಲ್ಲಿನ ಬದಲಾವಣೆಗಳೊಂದಿಗೆ ಕಾನೂನಿನಲ್ಲಿಯೂ ಪರಿವರ್ತನೆಗಳಾಗಿವೆ. ಇಂದಿನ ದಿನಗಳಲ್ಲಿ ಸಾಮಾಜಿಕ ಸ್ಥಿತಿಗತಿಗಳಲ್ಲಿ, ವ್ಯಕ್ತಿ-ವ್ಯಕ್ತಿಯ ಸಂಬಂಧದಲ್ಲಿ, ಸಮಾಜ- ಸಮಾಜದ ಸಂಬಂಧದಲ್ಲಿ ಅಗಾಧ ಬದಲಾವಣೆಗಳಾಗುತ್ತಿದೆ. ಅಂತೆಯೇ ಕಾನೂನಿನ ಕುರಿತ ಜನತೆಯ ಚಿಂತನೆಯಲ್ಲಿಯೂ ಬದಲಾವಣೆಗಳಾಗುತ್ತಿದೆ. ಈ ಅಂಶಗಳ ಕುರಿತು ಅಧ್ಯಯನ ಪೀಠ ಅಧ್ಯಯನ ನಡೆಸಬೇಕು ಎಂದು ಆಶಿಸಿದರು.

ಕರ್ನಾಟಕದ ಸಾಹಿತ್ಯ ಕ್ಷೇತ್ರದ ಕ್ರಾಂತಿ ಗಮನಾರ್ಹವಾದುದು. ನಮ್ಮ ದೇಶದ ಕಾನೂನಿಗೆ ಆಧಾರವಾದ ಸಂವಿಧಾನದ ಆಶಯಗಳು ಬಸವಣ್ಣನವರ ಚಿಂತನೆಗಳನ್ನೇ ಬಿಂಬಿಸುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸಕ್ತಿ ವಹಿಸಿ ಸ್ಥಾಪಿಸಿದ ಈ ಅಧ್ಯಯನ ಪೀಠವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತಾಗಲಿ ಎಂದು ನುಡಿದರು.

ವಿಜ್ಞಾನೇಶ್ವರ ಅಧ್ಯಯನ ಪೀಠದ ಅಧ್ಯಕ್ಷ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜಪಾಟೀಲ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ಬಿ.ಎನ್. ಶ್ರೀಕೃಷ್ಣ, ಕರ್ನಾಟಕ ಕಾನೂನು ವಿವಿ ಕುಲಪತಿ ಪ್ರೊ.ಈಶ್ವರ ಭಟ್, ಸಚಿವರಾದ ವಿ.ಸೋಮಣ್ಣ, ಡಾ. ಸುಧಾಕರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಗಿರೀಶ್ ಹೊಸೂರು ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT