ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ನಿಂದಿಸಿದವರ ವಿರುದ್ಧ ಕ್ರಮಕ್ಕೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಆಗ್ರಹ

Last Updated 30 ಮೇ 2022, 9:40 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯ ತಿರುಚಿ ಬರೆದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಆಗ್ರಹಿಸುತ್ತದೆ ಎಂಬುದಾಗಿ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.

ಈ ವಿಚಾರವಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ಜಗದ ಕವಿ, ಯುಗದ ಕವಿ, ನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕರ್ನಾಟಕದಲ್ಲಿ ಯಾವುದಾದರೂ ಇದೆ ಅಂದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ’ ಗೀತೆಯನ್ನು ‘ನಾಡಗೀತೆ’ ಮಾಡಬೇಕೆಂದು ಮೊದಲು ಅಳವಡಿಸಿಕೊಂಡದ್ದು ಸಾಹಿತ್ಯ ಪರಿಷತ್ತು. 1971ರಲ್ಲಿ ಕುವೆಂಪು ಅವರ ಸಮ್ಮತಿ ಪಡೆದು ನಾಡಗೀತೆಯನ್ನು ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲಾಗುತ್ತಿತ್ತು’ ಎಂದು ಉಲ್ಲೇಖಿಸಿದ್ದಾರೆ.

‘ಈ ಮೂಲಗೀತೆ 1924ರಲ್ಲಿ ರಚನೆಯಾಗಿ, ಇಂದಿಗೆ 98 ವರ್ಷವಾಯಿತು. ಎರಡು ಸಲ ಪರಿಷ್ಕರಣೆಗೊಂಡು ಮೈಸೂರಿನ ಸಂಪದಭ್ಯುದಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಮತ್ತೆ ಪರಿಷ್ಕರಣೆಗೊಂಡು ಕುವೆಂಪು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಯಿತು. ಇದು ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಗೀತೆ. ಭಾರತಾಂತರ್ಗತ ಕರ್ನಾಟಕ, ಕರ್ನಾಟಕಾಂತರ್ಗತ ಭಾರತ ಎಂಬುದನ್ನು ಆವೇಶವಿಲ್ಲದೆ, ಘೋಷಣೆಗಳಿಲ್ಲದೆ ಸಾರುವ ಭಾವನಾತ್ಮಕ ಗೀತೆಯಿದು. ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು. ಅದರ ಅನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ, ಪರಿಷತ್ತಿನ ಆಯ್ಕೆಯನ್ನು ದೃಢಗೊಳಿಸಿ, 6-1-2004ರಂದು ಕರ್ನಾಟಕದ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು’ ಎಂದು ಅವರು ಹೇಳಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಮನುಜ ಮತ ವಿಶ್ವಪಥ’ ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಪ್ರಕೃತಿಯಲ್ಲಿ ದೇವರನ್ನು ಕಾಣುವ, ದೇವರಲ್ಲಿ ಪ್ರಕೃತಿಯನ್ನು ಕಾಣುವ ದೈವಿಕ ಸಂಬಂಧಗಳನ್ನು ಪ್ರತಿಪಾದಿಸಿದ ಸರ್ವೋದಯ ತತ್ವ ಪ್ರತಿಪಾದಕರು ಕುವೆಂಪು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು ‘ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರು ಯಾರೂ ಕುವೆಂಪು ಅವರ ಕುರಿತು ಚಕಾರ ಎತ್ತುವ ಧೈರ್ಯವನ್ನು ಮಾಡುವುದಿಲ್ಲ. ಯಾರು ಈ ಮಹಾದಾರ್ಶನಿಕರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ ಎಂದು ಮಹೇಶ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಶ್ರೀರಾಮಕೃಷ್ಣ ಪರಮಹಂಸರ, ಶ್ರೀ ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮಿಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆಯನ್ನು ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಖಂಡಿಸುವುದರ ಜೊತೆಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT