ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಗ್ರಾಮ ಭಾರತದ ಲೇಖಕ: ಕುಂ.ವೀ

ಅಭಿಮಾನಿಗಳಿಂದ 70ನೇ ಜನ್ಮದಿನ ಆಚರಣೆ, ಕೃತಿ ಲೋಕಾರ್ಪಣೆ
Last Updated 1 ಅಕ್ಟೋಬರ್ 2022, 16:35 IST
ಅಕ್ಷರ ಗಾತ್ರ

ಶಿವಮೊಗ್ಗ: ’ನಮ್ಮದು ಎರಡು ನಮೂನೆಯ ಭಾರತ. ಒಂದು ಹಳ್ಳಿಗಳನ್ನೊಳಗೊಂಡದ್ದು, ಮತ್ತೊಂದು ಅದಾನಿ, ಅಂಬಾನಿ ಇರುವ ಇಂಡಿಯಾ. ಆದರೆ ನಾನು ಭಾರತದ ಪರವಾಗಿ ಇರುವ ಲೇಖಕ. ಹಳ್ಳಿಗರ ಪರ, ಸವಲತ್ತುಗಳ ಇಲ್ಲದವರ ಪಕ್ಷಪಾತಿ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಶಿಕಾರಿಪುರದ ಸುವ್ವಿ ಪಬ್ಲಿಕೇಷನ್, ಜನಸ್ಪಂದನ ಟ್ರಸ್ಟ್, ಅಭಿಮಾನಿ ಬಳಗ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಶನಿವಾರ ಇಲ್ಲಿ ಆಯೋಜಿಸಿದ್ದ ತಮ್ಮ 70ನೇ ಜನ್ಮದಿನಾಚರಣೆ ಹಾಗೂ ‘ಕುಂ.ವೀ 70, ಕತೆ 50’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಳ್ಳಿಯಲ್ಲಿರುವ ಒಬ್ಬ ಮನುಷ್ಯನನ್ನು ಲೇಖಕನನ್ನಾಗಿ ಮಾಡಿ, ಅವನು ಬರೆದ ಕಾಂಜಿ–ಪೀಂಜಿಗಳನ್ನು ಪ್ರಕಟಿಸಿ ಎಲ್ಲ ರೀತಿಯ ಪ್ರಶಸ್ತಿಗಳನ್ನು ಕೊಟ್ಟಂತಹ ಈ ನೆಲದ ಋಣ ನನಗೆ ತೀರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.

’ಬರಗಾಲ,ಕಷ್ಟಕಾರ್ಪಣ್ಯಗಳ ಕಂಡುಂಡು ಬೆಳೆದವರು ನಾವು.ಅಮೆರಿಕದ ಕೆಂಪು ಜೋಳ ಉಂಡವರು. ಈ ಎಲ್ಲ ಅನುಭವಗಳ ದಟ್ಟೈಸುವಿಕೆಯಿಂದ ಆಕಸ್ಮಿಕವಾಗಿ ಕಥೆಗಾರನಾದವನು. ಸಮಾಜಕ್ಕೆ ನಮ್ಮ ಅನುಭವ ಹೇಳಿಕೊಳ್ಳದಿದ್ದರೆ ಏನಾಗುತ್ತೇನೋ ಎಂದು ಕಾಡಿದ ಭಯ ನನ್ನ ಬರವಣಿಗೆಗೆ ಶಕ್ತಿ ತುಂಬಿತು. ಯಾರೂ ಮಾತನಾಡಿಸುವವರು ಇಲ್ಲದವರನ್ನು ಮಾತನಾಡಿಸಿದೆ. ನನಗಾದ ಅನುಭವಗಳನ್ನು ಕನ್ನಡದ ವಾಚಕರಿಗೆ ಹಂಚಬೇಕು ಎಂದು 20ನೇ ವಯಸ್ಸಿನಲ್ಲಿ ಕೂಳು ಎಂಬ ಕಥೆ ಬರೆದೆ‘ ಎಂದು ನೆನಪಿಸಿಕೊಂಡರು.

’ಆತ್ಮವಿಶ್ವಾಸ ಇಲ್ಲದಿದ್ದರೆ ಲೇಖಕ ಏನೂ ಸಾಧಿಸಲು ಆಗೊಲ್ಲ. ಅದೊಮ್ಮೆ ಮಲ್ಲೇಪುರಂ ಜಿ.ವೆಂಕಟೇಶ ಅವರೊಂದಿಗೆ ಸವಾಲು ಸ್ವೀಕರಿಸಿ ಎಂಟು ದಿನಗಳಲ್ಲಿ ಕಾದಂಬರಿ ಬರೆದೆನು. ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬರುತ್ತದೆ. ಎಂದು ಮೊದಲೇ ಹೇಳಿದ್ದೆನು. ಅದು ನಿಜವಾಯಿತು. ಇದು ಲೇಖಕನಲ್ಲಿ ಇರುವ ಆತ್ಮವಿಶ್ವಾಸ. ಲೇಖಕ ಮಾನಸಿಕವಾಗಿ ಬೆಳೆಯುವ ಪರಿ’ ಎಂದರು.

ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಮಾತನಾಡಿ, ಕುಂ.ವೀ ಸತತವಾಗಿ ನಮ್ಮ ಸಮಾಜದೊಂದಿಗೆ ಸಂವಾದ, ಸಂಭಾಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಕನ್ನಡ ಭಾಷೆ, ಸಾಹಿತ್ಯ ಸಾವಿರ ವರ್ಷ ಕಂಡೇ ಇರದ ಪ್ರಪಂಚವನ್ನು ಪರಿಚಯಿಸಿದ ಮಹಾನ್‌ ಬರಹಗಾರ ಎಂದರು.

ಕನ್ನಡ ಸಮಾಜ ಈಗಲೂ ಶ್ರದ್ಧೆ, ನಂಬಿಕೆ ಇಟ್ಟಿರುವುದು ಬರಹಗಾರರ ಮೇಲೆ. ಯಾರು ನಮ್ಮ ಮೇಲೆ ತಪ್ಪು ತಪ್ಪಾದ, ವಿಕೃತ ಅಸಹ್ಯಗಳನ್ನು ಹೇಳಿದರೂ, ನೀವು ಹೇಳುವುದಕ್ಕಿಂತ ನಮ್ಮ ಕಥೆಗಾರರ ಕಥೆಗಳನ್ನು ನಂಬುತ್ತೇವೆ ಎಂದು ಹೇಳುವುದೇ ಕನ್ನಡ ಸಮಾಜದ ಆರೋಗ್ಯವಂತಿಕೆ ಎಂದು ಹೇಳಿದರು.

ಸಾಹಿತಿ ಡಾ. ಹಾಫೀಜ್ ಕರ್ನಾಟಕಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್, ಜ್ಞಾನಾಮೃತ ವಸತಿ ಶಿಕ್ಷಣ ಸಂಸ್ಥೆ ಗೌರವ ಅಧ್ಯಕ್ಷ ಎಂ.ಜಿ. ಗೌಡ,ಕುಂ.ವೀ ಜನ್ಮೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ,ಸುವ್ವಿ ಪಬ್ಲಿಕೇಷನ್ಸ್ ನ ಪ್ರಕಾಶಕ ಬಿ.ಎನ್. ಸುನಿಲ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT