ಮುಖ್ಯಮಂತ್ರಿ, ಕುಟುಂಬದ ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ನಿರಂತರ: ಯತ್ನಾಳ್
ಬೆಂಗಳೂರು: ‘ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ವಿರುದ್ಧ ನನ್ನ ಹೋರಾಟ ನಿರಂತರ ಮುಂದುವರಿಯಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಮಾತ್ರವಲ್ಲ, ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲ ವರ್ಗಾವಣೆ ಮುಖ್ಯಮಂತ್ರಿ ಮನೆಯಿಂದಲೇ ಆಗುವುದು. ಅದಲ್ಲದೆ, ‘ಡಿ’ ಗ್ರೇಡ್ ವರ್ಗಾವಣೆ ಸಮೇತ ಮುಖ್ಯಮಂತ್ರಿ ಕುಟುಂಬದಿಂದಲೇ ಆಗಬೇಕು. ಅಷ್ಟು ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ತೊಡಗಿದೆ’ ಎಂದು ಗಂಭೀರ ಆರೋಪ ಮಾಡಿದರು.
‘ನಾನು ಯಾರ ಏಜೆಂಟೂ ಅಲ್ಲ. ಬಿಜೆಪಿ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗ. ಯಾರ ಪರವಾಗಿ ನಿಲ್ಲಲು ನನಗೆ ಹುಚ್ಚು ಹಿಡಿದಿಲ್ಲ’ ಎಂದೂ ಯತ್ನಾಳ್ ಹೇಳಿದರು.
‘ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡಿರುವುದರಿಂದ ನ್ಯಾಯ ಸಿಗಲ್ಲ. ಮುಖ್ಯಮಂತ್ರಿ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಿಡಿತದಲ್ಲಿದೆ ಎಸ್‌ಐಟಿ. ಹೀಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತೇನೆ’ ಎಂದರು.
‘ಸಿ.ಡಿ ಹಿಂದೆ ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಬಿಜೆಪಿ ನಾಯಕರ ಕೈವಾಡ ಇದ್ದರೂ ಇರಬಹುದು’ ಎಂದು ಆರೋಪಿಸಿದ ಯತ್ನಾಳ್, ‘ಪತ್ರಕರ್ತನ ಪುತ್ರಿ ಜನ್ಮದಿನ ಕಾರ್ಯಕ್ರಮಕ್ಕೆ ಕೇವಲ ಕಾಂಗ್ರೆಸ್ ಮುಖಂಡರು ಮಾತ್ರವಲ್ಲ, ಬಿಜೆಪಿ ನಾಯಕರೂ ಹೋಗಿದ್ದರು. ಅವರ ಫೋಟೊಗಳನ್ನು ಬಿಡುಗಡೆ ಮಾಡಬೇಕು. ಕಾರ್ಯಕ್ರಮಕ್ಕೆ ಯಾರೆಲ್ಲ ಹೋಗಿದ್ದರು ಎಂಬುದನ್ನೂ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.