ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸೂಚಿಸಿದರೆ ಮತ್ತೆ ಮಂಡ್ಯದಿಂದ ಸ್ಪರ್ಧಿಸುವೆ: ನಿಖಿಲ್‌ ಕುಮಾರಸ್ವಾಮಿ

Last Updated 29 ನವೆಂಬರ್ 2021, 14:00 IST
ಅಕ್ಷರ ಗಾತ್ರ

ಮಳವಳ್ಳಿ: ‘ಮಂಡ್ಯದಲ್ಲಿ ಮತ್ತೆ ಸ್ಪರ್ಧಿಸುವಂತೆ ಪಕ್ಷ ಸೂಚಿಸಿದರೆ ಸ್ಪರ್ಧೆ ಮಾಡುವೆ. ಜಿಲ್ಲೆಯ ಜನರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ. ನಿರಂತರವಾಗಿ ಜನರ ಜತೆ ಇರುತ್ತೇನೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಹೊರವಲಯದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣ, ಕಿರುಗಾವಲು, ಮೂಗನಕೊಪ್ಪಲು, ಬಂಡೂರು ಗ್ರಾಮಗಳಲ್ಲಿ ವಿಧಾನ ಪರಿಷತ್ ಚುನಾವಣೆ ಸಂಬಂಧ ಆಯೋಜಿಸಿದ್ದ ಚೊಟ್ಟನಹಳ್ಳಿ, ತಳಗವಾದಿ, ದೊಡ್ಡಬುವಳ್ಳಿ, ಕಿರುಗಾವಲು ಜಿ.ಪಂ.ಕ್ಷೇತ್ರವಾರು ಗ್ರಾ.ಪಂ.ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಗ್ಗೆ ಚರ್ಚೆ ಅಪ್ರಸ್ತುತ. ನಮ್ಮ ಕುಟುಂಬವು ಚುನಾವಣೆಗಳಲ್ಲಿ ಸೋಲು-ಗೆಲುವುಗಳನ್ನು ಸಮನಾಗಿ ಕಂಡಿದೆ. ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರು ಸೋತು ಗೆದ್ದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ನನಗೆ ಮೊದಲ ಸ್ಪರ್ಧೆಯಾಗಿತ್ತು. ಆಕಸ್ಮಿಕವಾಗಿ ಚುನಾವಣೆಗೆ ಬಂದೆ. ಬಿಜೆಪಿ, ಕಾಂಗ್ರೆಸ್, ರೈತಸಂಘ ಸೇರಿದಂತೆ ಹಲವರ ಕುತಂತ್ರ ರಾಜಕಾರಣದಿಂದ ಸೋಲಾಯಿತು’ ಎಂದರು.

‘ವಿಧಾನ ಪರಿಷತ್‌ಗೆ ಮತ್ತೆ ಅಪ್ಪಾಜಿಗೌಡ ಅವರು ಸ್ಪರ್ಧಿಸಿದ್ದು, ಒಮ್ಮತದಿಂದ ಅವರನ್ನು ಆಯ್ಕೆ ಮಾಡಬೇಕು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಗೆ ₹ 8,500 ಕೋಟಿ ಅನುದಾನ ನೀಡಿದ್ದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಮಂಡ್ಯ ಬಜೆಟ್ ಎಂದು ವ್ಯಂಗ್ಯವಾಡಿದ್ದರು. ನಮ್ಮ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಎಲ್ಲ ಅನುದಾನವನ್ನು ಅವರಿಗೆ ಬೇಕಾದ ಜಿಲ್ಲೆಗಳಿಗೆ ಹಂಚಿಕೆ ಮಾಡಿಕೊಂಡಿತ್ತು’ ಎಂದರು.

ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಅಪ್ಪಾಜಿಗೌಡ ಅವರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಕಾಂಗ್ರೆಸ್‌ನ ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದರು.

ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಎನ್.ಅಪ್ಪಾಜಿಗೌಡ ಮಾತನಾಡಿ, ಎಲ್ಲರೂ ನಿಯಮದಂತೆ ಮತ ಚಲಾಯಿಸಬೇಕು ಎಂದರು.

ನಾಗಮಂಗಲ ಶಾಸಕ ಸುರೇಶ್ ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಕೃಷ್ಣ, ನಿರ್ದೇಶಕರಾದ ಎಚ್.ಟಿ.ಮಂಜು, ನೆಲ್ಲಿಗೆರೆ ಬಾಲು, ಜಿ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ರವಿ ಕಂಸಾಗರ, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮು, ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲೇಗೌಡ, ಅಪ್ಪಾಜಿಗೌಡರ ಪತ್ನಿ ಮಧುರಮಣಿ, ಮುಖಂಡರಾದ ಶ್ರೀಧರ್, ಸಿದ್ದಾಚಾಜಿ, ಶಂಕರೇಗೌಡ, ಸೋಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT