ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ 3ನೇ ಅಲೆ ಉತ್ತುಂಗಕ್ಕೆ: ಐಐಎಸ್ಸಿ ಸಂಶೋಧಕರ ಲೆಕ್ಕಾಚಾರ

Last Updated 6 ಜನವರಿ 2022, 19:16 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಫೆಬ್ರವರಿ ಮೊದಲ ವಾರ ಕೋವಿಡ್ ಮೂರನೇ ಅಲೆ ಉತ್ತುಂಗ ತಲುಪಲಿದೆ. ದಿನವೊಂದಕ್ಕೆ ಗರಿಷ್ಠ 1.20 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರು ಸಂಖ್ಯಾಶಾಸ್ತ್ರೀಯ ಲೆಕ್ಕಾಚಾರ ಹಾಕಿದ್ದಾರೆ.

ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್‌ಐ) ಸಹಯೋಗದಲ್ಲಿ ಈ ಲೆಕ್ಕಾಚಾರ ನಡೆದಿದೆ. ರಾಜ್ಯದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು ಹಾಗೂ ವಿದೇಶಗಳಲ್ಲಿ ಓಮೈಕ್ರಾನ್ ಸೋಂಕು ಹರಡಿರುವುದರ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ.

‘ಪ್ರಕರಣಗಳ ಹರಡುವಿಕೆ ಜನರ ವರ್ತನೆಯನ್ನು ಆಧರಿಸಿರುತ್ತದೆ. ಸೋಂಕು ದಿನವೊಂದಕ್ಕೆ 40 ಸಾವಿರಕ್ಕೆ ತಲುಪಿ, ಇಳಿಮುಖವಾಗಲೂ ಬಹುದು. ವೇಗವಾಗಿ ಹರಡಿದರೆ ದಿನವೊಂದಕ್ಕೆ ವರದಿಯಾಗುವ ಪ್ರಕರಣಗಳ ಸಂಖ್ಯೆ 80 ಸಾವಿರಕ್ಕೆ ತಲುಪಿ, ಒಂದು ಲಕ್ಷದ ಗಡಿಯನ್ನೂ ದಾಟಬಹುದು.’ ಎಂದು ಸಂಖ್ಯಾಶಾಸ್ತ್ರೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಶಿವಾ ಆತ್ರೇಯ, ರಾಜೇಶ್ ಸುಂದರೇಶನ್ ನೇತೃತ್ವದ ತಂಡ ಪ್ರಕರಣಗಳ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆ. ಈ ವರದಿಯನ್ನು ಅವರು ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಸಲ್ಲಿಸಿದ್ದಾರೆ.

5 ಸಾವಿರ ದಾಟಿದ ಪ್ರಕರಣ:ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಗುರುವಾರ 5 ಸಾವಿರ ಗಡಿ (5,031) ದಾಟಿದೆ. ಕೊರೊನಾ ಸೋಂಕಿತರಲ್ಲಿ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.

ಎರಡನೇ ಅಲೆಯಲ್ಲಿ 2021ರ ಮೇ ತಿಂಗಳಲ್ಲಿ ದಿನವೊಂದಕ್ಕೆ 50 ಸಾವಿರ ದಾಟಿದ್ದ ಹೊಸ ಪ್ರಕರಣಗಳ ಸಂಖ್ಯೆ, ಜೂನ್ ಬಳಿಕ ಇಳಿದಿತ್ತು. ಆರು ತಿಂಗಳ ನಂತರ ದಿನವೊಂದಕ್ಕೆ 5 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ 1.27 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣ ಶೇ 3.95ಕ್ಕೆ ತಲುಪಿದೆ. 25 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. 17 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 6 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT